ನವದೆಹಲಿ: ಒತ್ತುವರಿ ತೆರವಿಗೆ ನೋಟಿಸ್ ನೀಡಿದರೂ ಜಾಗ ಖಾಲಿ ಮಾಡದ ಕಾರಣಕ್ಕಾಗಿ ಅನುವಾರ್ಯವಾಗಿ ಯಲಹಂಕದ ಫಕೀರ್ ಕಾಲೋನಿ ಮತ್ತು ವಸೀಮ್ ಲೇಔಟ್ ನ ವಸತಿಗಳನ್ನು ನೆಲಸಮಗೊಳಿಸಬೇಕಾಯಿತು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟೀಕರಣ ನೀಡಿದ್ದಾರೆ.
ಕರ್ನಾಟಕ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಬೆಂಗಳೂರಿನ ಯಲಹಂಕದ ಫಕೀರ್ ಕಾಲೋನಿ ಮತ್ತು ವಸೀಮ್ ಲೇಔಟ್ ನ ವಸತಿಗಳನ್ನು ನೆಲಸಮಗೊಳಿಸಲಾಗಿದೆ. ಆ ಪ್ರದೇಶ ತ್ಯಾಜ್ಯ ನಿರ್ವಹಣೆಗೆ ಸಂಬಂಧಿಸಿದ ಪ್ರದೇಶವಾಗಿದ್ದು, ಅದು ಜನವಸತಿಗೆ ಸೂಕ್ತವಾದ ಪ್ರದೇಶವಲ್ಲ. ಆದ್ದರಿಂದ ಸರ್ಕಾರಿ ಜಮೀನಿನಲ್ಲಿ ಅನಧಿಕೃತವಾಗಿ ನೆಲೆಸಿದ್ದವರಿಗೆ ನೋಟೀಸ್ ನೀಡಿ ತೆರವುಗೊಳಿಸಲು ಸೂಚನೆ ನೀಡಲಾಗಿತ್ತು. ಆದರೆ ಸರ್ಕಾರದ ಸೂಚನೆಗೆ ಮಣಿಯದೇ ಸ್ತಳದಲ್ಲೇ ವಾಸ ಇದ್ದ ಕಾರಣ,ಈಗ ವಸತಿಗಳನ್ನು ನೆಲಸಮಗೊಳಿಸಿ ಒತ್ತುವರಿಯನ್ನು ತೆರವುಗೊಳಿಸಲಾಗಿದೆ ಎಂದು ತಿಳಿಸಿದರು.
ಮಾನವೀಯತೆಯಿಂದ ನಿರಾಶ್ರಿತರಿಗೆ ಪರ್ಯಾಯ ವ್ಯವಸ್ಥೆ:
ತೆರವು ಕಾರ್ಯಾಚರಣೆ ನಡೆಸಿದ ಕಡೆ ಇದ್ದ ಬಹುತೇಕ ಜನರು ವಲಸಿಗರಾಗಿದ್ದು, ಮಾನವೀಯತೆಯ ದೃಷ್ಟಿಯಿಂದ ನಿರಾಶ್ರಿತರಿಗೆ ಉಳಿದುಕೊಳ್ಳಲು ಪರ್ಯಾಯ ವ್ಯವಸ್ಥೆ ಕಲ್ಪಿಸುವಂತೆ ಇಲಾಖೆಯ ಕಾರ್ಯದರ್ಶಿ ಹಾಗೂ ಆಯುಕ್ತರಿಗೆ ಸೂಚಿಸಲಾಗಿದೆ ಎಂದರು.
ದೇಶಾದ್ಯಂತ ಮಹಾತ್ಮಾ ಗಾಂಧಿ ಉದ್ಯೋಗ ಖಾತ್ರಿ ಯೋಜನೆ ಬಚಾವ್ ಆಂದೋಲನ:
ಕೇಂದ್ರ ಸರ್ಕಾರ ಮಹಾತ್ಮಾ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯನ್ನು ವಿಬಿ_ ಜಿ ರಾಮ್ _ ಜಿ ಎಂದು ಬದಲಾಯಿಸಲಾಗಿದ್ದು ಜನವರಿ ಐದರಿಂದ ದೇಶಾದ್ಯಂತ ಮಹಾತ್ಮಾ ಗಾಂಧಿ ಉದ್ಯೋಗ ಖಾತ್ರಿ ಯೋಜನೆ ಬಚಾವ್ ಆಂದೋಲನವನ್ನು ಕೈಗೊಳ್ಳಲಾಗುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

