Mon. Dec 23rd, 2024

ಡಿಪಿಆರ್ ಸಿದ್ದಪಡಿಸದೆ ಇರುವುದಕ್ಕೆ ಕಾರ್ಯದರ್ಶಿಗಳಿಗೆ ಸಿಎಂ ತರಾಟೆ

Share this with Friends

ಬೆಂಗಳೂರು,ಜೂ.26: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬುಧವಾರ ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ಕರ್ನಾಟಕ ಗಣಿ ಪರಿಸರ ಪುನಶ್ಚೇತನ ನಿಗಮದ ಪ್ರಗತಿ ಪರಿಶೀಲನಾ ಸಭೆ ನಡೆಸಿದರು.

ಸಭೆಯಲ್ಲಿ ಡಿಪಿಆರ್ ಸಿದ್ದಪಡಿಸದೆ ಇರುವುದಕ್ಕೆ ಕಾರ್ಯದರ್ಶಿಗಳನ್ನು ಸಿಎಂ ತೀವ್ರ ತರಾಟೆಗೆ ತೆಗೆದುಕೊಂಡರು.

ಕೆಎಂಇಆರ್ ಸಿ ಗೆ ಸಿಇಪಿಎಂಐಝಡ್ ಯೋಜನೆಯಡಿ ಒಟ್ಟು 24,996.30 ಕೋಟಿ ರೂ. ಒದಗಿಸಲಾಗಿದೆ. ಬಳ್ಳಾರಿ, ವಿಜಯನಗರ, ಚಿತ್ರದುರ್ಗ ಹಾಗೂ ತುಮಕೂರು ಜಿಲ್ಲೆಗಳಿಗೆ ಒದಗಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಇದರಲ್ಲಿ ಯೋಜನೆಗಳ ಆಯ್ಕೆ ಹಾಗೂ ಕಾಮಗಾರಿಗಳ ಪ್ರಗತಿಯ ಮೇಲ್ವಿಚಾರಣಾ ಪ್ರಾಧಿಕಾರ ಸುಪ್ರೀಂ ಕೋರ್ಟಿನ ನಿವೃತ್ತ ನ್ಯಾಯಮೂರ್ತಿ ಬಿ. ಸುದರ್ಶನ ರೆಡ್ಡಿ ಅವರು ಒಟ್ಟು 7928.78 ಕೋಟಿ ರೂ. ಮೊತ್ತದ 358 ಯೋಜನೆಗಳನ್ನು ಅನುಮೋದಿಸಿದ್ದಾರೆ

ಈ ಪೈಕಿ ಒಟ್ಟು 3469.41 ಕೋಟಿ ರೂ. ವೆಚ್ಚದ 182 ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ. 135 ಯೋಜನೆಗಳಿಗೆ ಟೆಂಡರ್‌ ಕರೆಯಲಾಗಿದ್ದು, 47 ಕಾಮಗಾರಿಗಳಿಗೆ ಕಾರ್ಯಾದೇಶ ನೀಡಲಾಗಿದೆ. 23 ಕಾಮಗಾರಿಗಳನ್ನು ವಿವಿಧ ಸಂಸ್ಥೆಗಳಿಗೆ ವಹಿಸಲಾಗಿದೆ ಎಂದು ತಿಳಿಸಿದರು.

ಈ ಯೋಜನೆಗಳ ಅನುಷ್ಠಾನಕ್ಕೆ ಒಂದು ವಾರದೊಳಗೆ ಡಿ.ಪಿ.ಆರ್. ಪೂರ್ಣಗೊಳಿಸಬೇಕು ಎಂದು ಅಧಿಕಾರಿಗಳಿಗೆ ಸಿಎಂ ಸೂಚಿಸಿ,ಯಾವುದೇ ಕಾರಣಕ್ಕೂ ವಿಳಂಬ ಆಗಕೂಡದು ಎಂದು ಎಚ್ಚರಿಕೆ ನೀಡಿದರು

ಯೋಜನೆಗಳ ಸಕಾಲಿಕ ಹಾಗೂ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಸಂಬಂಧಿಸಿದ ಇಲಾಖೆಯಲ್ಲಿ ಯೋಜನಾ ಮೇಲ್ವಿಚಾರಣೆ ಘಟಕ ಸ್ಥಾಪಿಸುವಂತೆ ಸೂಚಿಸಿದರು.

ರೈಲ್ವೆ ಯೋಜನೆಗಳಿಗೆ 5271.96 ಕೋಟಿ ರೂ. , ಕುಡಿಯುವ ನೀರಿನ ಯೋಜನೆಗಳಿಗೆ 4929.84 ಕೋಟಿ ರೂ., ಆರೋಗ್ಯ ಕ್ಷೇತ್ರಕ್ಕೆ 1915.78 ಕೋಟಿ ರೂ., ಪರಿಸರ ಪುನಃಸ್ಥಾಪನೆಗೆ 2655.17 ಕೋಟಿ ರೂ., ರಸ್ತೆಗಳು ಮತ್ತು ಸಂವಹನ ಯೋಜನೆಗಳಿಗೆ 2559.17 ಕೋಟಿ ರೂ. , ವಸತಿ ಯೋಜನೆಗಳಿಗೆ 1193.98 ಕೋಟಿ ರೂ. ನಿಗದಿ ಪಡಿಸಲಾಗಿದೆ,ವಸತಿ ಯೋಜನೆಗಳಡಿ ಫಲಾನುಭವಿಗಳನ್ನು ಶೀಘ್ರವೇ ಗುರುತಿಸುವಂತೆ ಸಿದ್ದರಾಮಯ್ಯ ಸೂಚಿಸಿದರು.

ಶಿಕ್ಷಣ ಇಲಾಖೆಯ ವ್ಯಾಪ್ತಿಯಲ್ಲಿ ಶಾಲೆಗಳ ಕಟ್ಟಡ ದುರಸ್ತಿ, ಕೊಠಡಿ, ಪ್ರಯೋಗಾಲಯ ಸ್ಥಾಪನೆಗೆ ಕ್ರಮ ಕೈಗೊಳ್ಳಬೇಕು,
ಅಂಗನವಾಡಿ ಕಟ್ಟಡ, ವಿದ್ಯಾರ್ಥಿ ನಿಲಯಗಳು ಮತ್ತಿತರ ಯೋಜನೆಗಳಿಗೆ ಒತ್ತು ನೀಡಬೇಕು ಎಂದು ತಾಕೀತು ಮಾಡಿದರು.

ಸಭೆಯಲ್ಲಿ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್‌, ಮುಖ್ಯಮಂತ್ರಿಯವರ ಅಪರ ಮುಖ್ಯ ಕಾರ್ಯದರ್ಶಿ ಎಲ್.ಕೆ. ಅತೀಕ್‌, ಕಾರ್ಯದರ್ಶಿ ಡಾ. ಕೆ.ವಿ. ತ್ರಿಲೋಕಚಂದ್ರ ಹಾಗೂ ಸರ್ಕಾರದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.


Share this with Friends

Related Post