Tue. Dec 24th, 2024

ಮಕ್ಕಳೊಂದಿಗೆ ಮುಖ್ಯ ಮಂತ್ರಿ ಸಿದ್ದರಾಮಯ್ಯ ಸಂವಾದ

Share this with Friends

ಬೆಂಗಳೂರು, ಮಾ.5:‌‌ ವಿದ್ಯಾರ್ಥಿಗಳು ವೈಚಾರಿಕತೆ, ವೈಜ್ಞಾನಿಕತೆ ಬೆಳೆಸಿಕೊಂಡು ಜ್ಞಾನದ ವಿಕಾಸವಾಗಬೇಕು ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.

ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ್ ಮೈಸೂರು ವತಿಯಿಂದ ನಮ್ಮ ಶಾಲೆ ನಮ್ಮ ಜವಾಬ್ದಾರಿ- ಸರ್ಕಾರಿ ಶಾಲೆಗಳ ಅಭಿವೃದ್ಧಿ ಹಾಗೂ ಬಲವರ್ಧನೆ ಕಾರ್ಯಕ್ರಮಕ್ಕೆ ಸಿದ್ದರಾಮಯ್ಯ ಅವರು ಗೃಹ ಕಚೇರಿ ಕೃಷ್ಣಾದಲ್ಲಿ ಚಾಲನೆ ನೀಡಿ ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ದೊರೆಯಬೇಕು ಎಂದು ಹೇಳಿದರು.

ತಾವು ಓದಿದ ಸಿದ್ದರಾಮನಹುಂಡಿ ಹಾಗೂ ಕುಪ್ಪೆಗಾಲ ಸರ್ಕಾರಿ ಶಾಲೆಯ ಮಕ್ಕಳೊಡನೆ ಮುಖ್ಯ ಮಂತ್ರಿಗಳು ಸಂವಾದ ನಡೆಸಿದರು.

ಸಂವಿಧಾನ ಏನು ಹೇಳುತ್ತದೆ ಹೇಳಿ ನೋಡೋಣ ಎಂದು ಸಿಎಂ ಮಕ್ಕಳನ್ನು ಕೇಳಿದಾಗ, ಮಕ್ಕಳು ಸಂವಿಧಾನದ ಪೂರ್ಣ ಪೀಠಿಕೆಯನ್ನು ಹೇಳಿದರು.

ಅದಕ್ಕೆ ಕೇವಲ ಕಂಠಪಾಠ ಮಾಡಿದರೆ ಸಾಲದು, ಅದರ ತಿರುಳನ್ನು ಅರಿತು ಅದರಂತೆ ನಡೆಯಬೇಕು ಎಂದು ಸಿದ್ದು ಸಲಹೆ ನೀಡಿದರು.

ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವ ಸಂವಿಧಾನದ ತಿರುಳು. ಸಮಾನತೆ ಸಮಸಮಾಜ ನಿರ್ಮಾಣ ವಾಗಬೇಕು. ಬುದ್ಧ, ಬಸವ, ಅಂಬೇಡ್ಕರ್ ಅವರು ಇದನ್ನೇ ಹೇಳಿಕೊಂಡು ಬಂದಿದ್ದರೂ ಇದು ಪೂರ್ಣವಾಗಿ ಹೋಗಿಲ್ಲ. ಇದನ್ನೆಲ್ಲ ಓದಿ ಅರ್ಥ ಮಾಡಿಕೊಂಡು ಮಕ್ಕಳು ಮನುಷ್ಯತ್ವ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.

ಶಾಲೆಗಳಲ್ಲಿ ಮೊಟ್ಟೆ, ಹಾಲು ಕೊಡ್ತಾ ಇದ್ದಾರೆಯೇ, ವಾರದಲ್ಲಿ ಎಷ್ಟು ದಿನ ಕೊಡುತ್ತಿದ್ದಾರೆ ಎಂದು ಪ್ರಶ್ನಿಸಿದಾಗವಾರದಲ್ಲಿ ಮೂರು ದಿನ ನೀಡಲಾಗುತ್ತಿದೆ ಎಂದು ಮಕ್ಕಳು ಉತ್ತರಿಸಿದರು.

ನಾನು ಓದುವಾಗ ಸಂವಿಧಾನ ಜಾರಿಗೆ ಬಂದಿತ್ತು. ನಾನು ಹುಟ್ಟಿದ್ದು ಸ್ವಾತಂತ್ರ್ಯ ಪೂರ್ವದಲ್ಲಿ. ನಂಜೇಗೌಡ ಎಂಬುವರು ನನಗೆ ಅಕ್ಷರಾಭ್ಯಾಸ ಮಾಡಿಸಿದರು. ಕನ್ನಡ ಓದು ಬರೆಯುವುದು, ಲೆಕ್ಕ ಮಾಡುವುದನ್ನು ಹೇಳಿಕೊಟ್ಟಿದ್ದರು. ಅವರು ಶಾಲೆ ಬಿಟ್ಟ ನಂತರ ಎಮ್ಮೆ ಮೇಯಿಸುತ್ತಿದ್ದ ನನ್ನನ್ನು ರಾಜಪ್ಪ ಎಂಬ ಮೇಷ್ಟ್ರು ಮನೆಗೆ ಬಂದು ನೇರವಾಗಿ 5 ನೇ ತರಗತಿಗೆ ಸೇರಿಸಿದ್ದರು ಎಂದು ‌ಬಾಲ್ಯದ ದಿನಗಳನ್ನು ಸಿದ್ದರಾಮಯ್ಯ ಮೆಲುಕು ಹಾಕಿದರು.

ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ಓದಿದ ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ , ಕುಪ್ಪೇಗಾಲ ಮತ್ತು ಕೆ.ಪಿ.ಎಸ್. ಸಿದ್ದರಾಮನಹುಂಡಿ ಇಲ್ಲಿಗೆ 10 ಲಕ್ಷ ರೂ.ದೇಣಿಗೆ ನೀಡಿದರು.

ಪ್ರಾಥಮಿಕ ಶಿಕ್ಷಣ ಸಚಿವ ಮಧು ಬಂಗಾರಪ್ಪ ಮಾತನಾಡಿ, 6 ಕೋಟಿ ರೂ.ಗಳನ್ನು ಹಳೆಯ ಶಾಲೆಯ ವಿದ್ಯಾರ್ಥಿಗಳು ನೀಡಿದ್ದಾರೆ. ಮಾಲೂರಿನಲ್ಲಿಯೂ ಕೂಡ ಆರು ಕೋಟಿ ರೂ.ಗಳನ್ನು ಹಳೆಯ ವಿದ್ಯಾರ್ಥಿಗಳು ಸಂಗ್ರಹಿಸಿದ್ದಾರೆ. ಸಾಮಾಜಿಕ ಕಳಕಳಿಯುಳ್ಳವರು ಮಕ್ಕಳಿಗೆ ಪಾಠವನ್ನೂ ಮಾಡಿದ್ದಾರೆ ಎಂದು ವಿವರಿಸಿದರು

ಸಚಿವರಾದ ಎಂ. ಬಿ.ಪಾಟೀಲ್, ಕೃಷ್ಣಬೈರೇಗೌಡ, ಸುಧಾಕರ್, ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್, ಅಪರ ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್ ಉಪಸ್ಥಿತರಿದ್ದರು.


Share this with Friends

Related Post