Fri. Nov 1st, 2024

ಸಿಎಂ, ಗೃಹ ಸಚಿವರ ಸಿಡಿ‌ ಬರಬಹುದು:ಹೊಸ ಬಾಂಬ್ ಸಿಡಿಸಿದ‌ ರಮೇಶ್

Share this with Friends

ಬೆಳಗಾವಿ,ಮೇ.7:ಸಿಎಂ ಸಿದ್ದರಾಮಯ್ಯ ಹಾಗೂ ಗೃಹ ಸಚಿವ ಪರಮೇಶ್ವರ್ ಅವರದ್ದೂ ಮುಂದೆ ಸಿಡಿ ಬರಬಹುದು ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಹೊಸ‌ ಬಾಂಬ್ ಸಿಡಿಸಿದ್ದಾರೆ.

ಬೆಳಗಾವಿಯ ಗೋಕಾಕ್ ಪಟ್ಟಣದಲ್ಲಿ ಮತದಾನಕ್ಕೂ ಮೊದಲು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು,ಸಿಡಿ ವಿಚಾರವನ್ನು ಮೊದಲಿನಿಂದಲೂ ಹೇಳಿಕೊಂಡು ಬಂದಿದ್ದೆ, ಆಗ ಎಲ್ಲರೂ ನನ್ನನ್ನು ಕಡೆಗಣಿಸಿದರು, ನಗುತ್ತಾ ನೋಡ್ತಿದ್ದರು. ಇವತ್ತು ಒಬ್ಬರಿಗೆ ಆಗಿದೆ, ಮುಂದೆ ಸಿದ್ದರಾಮಯ್ಯಗೂ ಬರಬಹುದು, ಪರಮೇಶ್ವರ್ ಅವರಿಗೂ ಬರಬಹುದು ಎಂದು ಮಾರ್ಮಿಕವಾಗಿ ನುಡಿದರು.

ಪ್ರಜ್ವಲ್ ರೇವಣ್ಣ ಕೇಸು ಯಾರು ಹೆಮ್ಮೆ ಪಡುವ ವಿಷಯ ಅಲ್ಲ, ಎಲ್ಲರೂ ತಲೆ ತಗ್ಗಿಸುವ ವಿಷಯ,ಅತಿ ಕೆಟ್ಟ ಪ್ರಮಾಣದಲ್ಲಿ ಆಗಿದೆ ಎಂದು ರಮೇಶ್‌ ಜಾರಕಿಹೊಳಿ ತಿಳಿಸಿದರು.

ಗೃಹ ಸಚಿವರು, ಮುಖ್ಯಮಂತ್ರಿಗಳು ಪಕ್ಷಾತೀತವಾಗಿ ಇದಕ್ಕೆ ಇತಿಶ್ರೀ ಹಾಡಬೇಕು. ಸಿಎಂ ಅವರ ಕೈ ಮುಗಿದು ಕೇಳಿಕೊಳ್ಳುತ್ತೇನೆ ಎಂದು ಮನವಿ ಮಾಡಿದರು.ರೇವಣ್ಣ ಅವರು ಬೇಕಿದ್ದರೆ ಕಾನೂನು ರೀತಿ ಹೋರಾಟ ಮಾಡಲಿ ಎಂದು ನುಡಿದರು.

ಪ್ರಜ್ವಲ್ ರೇವಣ್ಣ ಕೇಸ್‌ನಲ್ಲಿ ಡಿ.ಕೆ ಶಿವಕುಮಾರ್ ಆಡಿಯೋ ರಿಲೀಸ್ ವಿಚಾರಕ್ಕೆ ಪ್ರತಿಕ್ರಿಯಿಸಿದ ರಮೇಶ್ ಜಾರಕಿ ಹೊಳಿ, ಇದರಲ್ಲಿ ಡಿಕೆಶಿ ನೇರವಾಗಿ ಭಾಗಿಯಾಗಿರುವ ಬಗ್ಗೆ ನನ್ನ ಬಳಿ ಸಾಕ್ಷಿಯಿದೆ. ನನ್ನ ಕೇಸ್‌ನಲ್ಲೂ ಡಿಕೆಶಿ ಮಾತನಾಡಿರುವ ಸಾಕ್ಷಿ ಇದೆ, ಅದನ್ನೇ ಕೊಡುತ್ತೇನೆ. ನನ್ನ ಬಗ್ಗೆ ಷಡ್ಯಂತ್ರ ಮಾಡಿದ್ದಕ್ಕೆ ಸಾಕ್ಷಿಗಳೂ ಇವೆ ಎಂದು ಹೇಳಿದರು.

ಮಹಾನ್ ನಾಯಕನ ಹಣದಲ್ಲಿ ಬಹಳಷ್ಟು ಪ್ರಭಾವಿ ಇದ್ದಾರೆ. ಹಣ ಕೊಟ್ಟು ಎಲ್ಲವನ್ನೂ ಖರೀದಿ ಮಾಡಬೇಕು ಅನ್ನೋ ಸೊಕ್ಕು ಇದೆ. ದೇಶದಲ್ಲಿ ಕಾನೂನು ಉಳಿಯಬೇಕು ಅಂದ್ರೆ, ಇದು ನಿಲ್ಲಬೇಕು. ನನ್ನ ಕೇಸ್‌ನಲ್ಲಿ ಡಿಕೆಶಿ ಮಾತ್ರ ಭಾಗಿಯಾಗಿಲ್ಲ, ನಮ್ಮವರೂ ಇದ್ದಾರೆ, ಜೂನ್ 4ರ ನಂತರ ಎಲ್ಲವನ್ನೂ ಬಹಿರಂಗ ಪಡಿಸುತ್ತೇನೆ ಎಂದು ತಿಳಿಸಿದರು.

ನನ್ನ ಕೇಸ್‌ನಲ್ಲಿ ಎಸ್‌ಐಟಿ ತನಿಖೆ ಬಗ್ಗೆ ವಿಶ್ವಾಸ ಇಲ್ಲ. ಈ ಕೇಸ್ ಅನ್ನು ಸಿಬಿಐಗೆ ಕೊಟ್ಟರೆ ಸಾಕ್ಷಿ ಕೊಡುತ್ತೇನೆ,ಆದರೆ ಸಿಬಿಐಗೆ ಕೇಸ್ ಕೊಟ್ಟರೂ ಹಾಲಿ ಸುಪ್ರೀಂ ಕೋರ್ಟ್ ನ್ಯಾಯಾಧೀಶರು ಮೇಲುಸ್ತುವಾರಿ ಮಾಡಬೇಕು ಎಂದು ರಮೇಶ್ ತಿಳಿಸಿದರು.


Share this with Friends

Related Post