Sat. Mar 14th, 2026

ಸಿಎಂ ಪುತ್ರ ವ್ಯಾಮೋಹ ಪ್ರಜಾಪ್ರಭುತ್ವಕ್ಕೆ ಮಾರಕ: ಆರ್. ಅಶೋಕ ವಾಗ್ದಾಳಿ

Share this with Friends

ಬೆಂಗಳೂರು: “ನನ್ನ ಮಗನನ್ನು ನೋಡಿಕೊಳ್ಳಿ” ಎಂದು ಮತದಾರರಲ್ಲಿ ಮನವಿ ಮಾಡುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಂಬೇಡ್ಕರ್ ಅವರ ಪ್ರಜಾಪ್ರಭುತ್ವದ ತತ್ವಗಳಿಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದಾರೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ ಟೀಕಿಸಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ಅವರ ನಡೆ ರಾಜಪ್ರಭುತ್ವದಂತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. “ತಮ್ಮನ್ನು ತಾವು ಸಮಾಜವಾದಿ ಎಂದು ಕರೆದುಕೊಳ್ಳುವ ಮುಖ್ಯಮಂತ್ರಿಗಳು ಈಗ ಕುಟುಂಬ ರಾಜಕಾರಣಕ್ಕೆ ಇಳಿದಿದ್ದಾರೆ. ಇಂದು ಮಗನನ್ನು ನೋಡಿಕೊಳ್ಳಿ ಎನ್ನುವವರು, ನಾಳೆ ಮೊಮ್ಮಗನನ್ನೂ ನೋಡಿಕೊಳ್ಳಿ ಎನ್ನಬಹುದು. ಅಭ್ಯರ್ಥಿಗಳು ತಮ್ಮ ಅರ್ಹತೆಯ ಮೇಲೆ ಗೆದ್ದು ಬರಬೇಕೇ ಹೊರತು, ಈ ರೀತಿಯ ಭಾವನಾತ್ಮಕ ಹೇಳಿಕೆಗಳ ಮೂಲಕವಲ್ಲ. ಇದು ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರಿಗೆ ಮಾಡುವ ಅಪಚಾರ” ಎಂದು ಖಂಡಿಸಿದರು.

ಎಲ್‌ಪಿಜಿ ವಿಚಾರದಲ್ಲಿ ರಾಜಕೀಯ ಬೇಡ:

ರಾಜ್ಯದಲ್ಲಿ ಎಲ್‌ಪಿಜಿ ಮಾರಾಟಕ್ಕೆ ಸಂಬಂಧಿಸಿದಂತೆ ಎದ್ದಿರುವ ಗೊಂದಲಗಳ ಬಗ್ಗೆ ಪ್ರತಿಕ್ರಿಯಿಸಿದ ಅಶೋಕ, “ಸಂಕಷ್ಟದ ಸಮಯದಲ್ಲಿ ಸರ್ಕಾರ ಜವಾಬ್ದಾರಿಯಿಂದ ವರ್ತಿಸಬೇಕು. ಯುದ್ಧದ ಅನಿವಾರ್ಯ ಪರಿಸ್ಥಿತಿಗಳಿಂದ ಎಲ್‌ಪಿಜಿ ಕೊರತೆ ಎದುರಾದಾಗ ತಾಳ್ಮೆಯಿಂದ ಸಹಕರಿಸಬೇಕು. ಇದನ್ನು ಬಿಟ್ಟು ಬಂದ್‌ಗೆ ಕರೆ ನೀಡುವುದು ಅಥವಾ ಕಾಳಸಂತೆಗೆ ಅವಕಾಶ ಮಾಡಿಕೊಡುವುದು ಸರಿಯಲ್ಲ. ಪ್ರತಿಯೊಂದರಲ್ಲೂ ರಾಜಕೀಯ ಹುಡುಕುವ ಕಾಂಗ್ರೆಸ್ ಚಾಳಿ ಜನರಿಗೆ ತಿಳಿಯುತ್ತಿದೆ” ಎಂದರು.

ಗ್ಯಾರಂಟಿ ಹೆಸರಲ್ಲಿ ಡಿನ್ನರ್ ಪಾರ್ಟಿ ಸಂಸ್ಕೃತಿ:

ಕಾಂಗ್ರೆಸ್ ನಾಯಕರ ಡಿನ್ನರ್ ಪಾರ್ಟಿಗಳ ಬಗ್ಗೆ ವ್ಯಂಗ್ಯವಾಡಿದ ಅವರು, “ಒಂದೆಡೆ ರಾಜ್ಯದ ಜನಸಾಮಾನ್ಯರು ಕಷ್ಟದಲ್ಲಿದ್ದರೆ, ಇತ್ತ ಆಡಳಿತ ಪಕ್ಷದ ನಾಯಕರು ಡಿನ್ನರ್ ಪಾರ್ಟಿಗಳಲ್ಲಿ ಮಗ್ನರಾಗಿದ್ದಾರೆ. ಬಜೆಟ್‌ನಲ್ಲಿ ಜನರಿಗೆ ಏನೂ ಸಿಕ್ಕಿಲ್ಲ ಎಂದು ಅವರ ಪಕ್ಷದ ಶಾಸಕರೇ ಅಸಮಾಧಾನಗೊಂಡಿದ್ದಾರೆ. ಅಭಿವೃದ್ಧಿ ಕೆಲಸಗಳು ಕುಂಠಿತಗೊಂಡಿದ್ದು, ರಸ್ತೆ ಸೇರಿ ಮೂಲಸೌಕರ್ಯಗಳಿಗೆ ಅನುದಾನವಿಲ್ಲದಂತಾಗಿದೆ” ಎಂದು ದೂರಿದರು.

ಮತದಾರರ ಪಟ್ಟಿ ಪರಿಷ್ಕರಣೆ:

ರಾಜ್ಯದಲ್ಲಿ ಅಕ್ರಮವಾಗಿ ನೆಲೆಸಿರುವ ವಿದೇಶಿ ಪ್ರಜೆಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ ಅಶೋಕ, ಮತದಾರರ ಪಟ್ಟಿ ಪರಿಷ್ಕರಣೆ ವೇಳೆ ಬಾಂಗ್ಲಾದೇಶ ಹಾಗೂ ಪಾಕಿಸ್ತಾನದ ಪ್ರಜೆಗಳು ಸೇರ್ಪಡೆಯಾಗದಂತೆ ಚುನಾವಣಾ ಆಯೋಗ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.


Share this with Friends

Related Post