Mon. Dec 23rd, 2024

ಯತೀಂದ್ರ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು:ಆರ್‌.ಅಶೋಕ

Share this with Friends

ಬೆಂಗಳೂರು, ಮಾ. 29:ಡಾ.ಯತೀಂದ್ರ ಸಿದ್ದರಾಮಯ್ಯ ಅವರು ಕೇಂದ್ರ ಗೃಹ ಸಚಿವರ ಬಗ್ಗೆ ನೀಡಿದ ಹೇಳಿಕೆ ವಿರುದ್ಧ ಬಿಜೆಪಿ ಚುನಾವಣಾ ಆಯೋಗಕ್ಕೆ ದೂರು ನೀಡಲಿದೆ ಎಂದು ‌ಪ್ರತಿಪಕ್ಷದ ನಾಯಕ ಅಶೋಕ್ ತಿಳಿಸಿದರು.

ಯತೀಂದ್ರ ಹೀಗೆಯೇ ಮಾತನಾಡುತ್ತಿದ್ದರೆ ರಾಹುಲ್‌ ಗಾಂಧಿಯಂತೆ ಜೈಲಿಗೆ ಹೋಗುವ ಸ್ಥಿತಿ ಬರಲಿದೆ ಎಂದು ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್‌.ಅಶೋಕ ಹೇಳಿದರು

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ಅವರ ಮಗ ಎನ್ನುವ ಕಾರಣಕ್ಕೆ ಹಾಗೂ ರಾಷ್ಟ್ರ ನಾಯಕರ ಬಗ್ಗೆ ಮಾತನಾಡಿದರೆ ದೊಡ್ಡ ವ್ಯಕ್ತಿಯಾಗುತ್ತೇನೆ, ಇದರಿಂದ ಬೆಲೆ ಬರುತ್ತದೆ ಎಂಬ ಕಾರಣಕ್ಕೆ ಯತೀಂದ್ರ ಅವರು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಕುರಿತು ಟೀಕೆ ಮಾಡಿದ್ದಾರೆ. ಹತಾಶ ಮನೋಭಾವ, ಬುದ್ಧಿಭ್ರಮಣೆ ಹಾಗೂ ಅಪ್ರಬುದ್ಧತೆಯಿಂದ ಅವರು ಮಾತನಾಡಿದ್ದಾರೆ ಎಂದು ಟೀಕಿಸಿದರು.

ಮೈಸೂರಿನ ರಾಜಕಾರಣದ ಬಗ್ಗೆ ಮಾತನಾಡಲು ಕೂಡಾ ಯತೀಂದ್ರ ಅವರಿಗೆ ಯೋಗ್ಯತೆ ಇಲ್ಲ. ಅಲ್ಲಿನ ರಾಜಕಾರಣ ಬಿಟ್ಟು ಕೇಂದ್ರದ ರಾಜಕಾರಣದ ಬಗ್ಗೆ ಅವರು ಮಾತನಾಡಿದ್ದಾರೆ. ಇಂತಹ ಬಾಲಿಶ ಹಾಗೂ ಕೊಬ್ಬಿನ ಹೇಳಿಕೆ ನೀಡುವುದು ಕಾಂಗ್ರೆಸ್ಸಿನ ಡಿಎನ್‌ಎ ನಲ್ಲೇ ಇದೆ ಎಂದು ವಾಗ್ದಾಳಿ ನಡೆಸಿದರು

ರಾಜ್ಯದಲ್ಲಿ ಗೂಂಡಾ ಸರ್ಕಾರವಿದ್ದು, ಸಿಎಂ ಸಿದ್ದರಾಮಯ್ಯ ಗೂಂಡಾಗುರುವಾಗಿ ವರ್ತಿಸುತ್ತಿದ್ದಾರೆ. ಕರಸೇವಕರನ್ನು ಬಂಧಿಸಿ, ಹನುಮ ಧ್ವಜ ಇಳಿಸಿ, ಮುಸ್ಲಿಂ ದಂಗೆಕೋರರಿಗೆ ಆಶ್ರಯ ನೀಡಿದ್ದು ಇದೇ ಗೂಂಡಾ ಕಾಂಗ್ರೆಸ್‌ ಎಂದು ಜರಿದರು.

ಬಿಜೆಪಿ-ಜೆಡಿಎಸ್‌ ಹಾಲು ಜೇನಿನಂತೆ ಕೆಲಸ ಮಾಡುತ್ತಿದೆ. ಇನ್ನಷ್ಟು ಚೆನ್ನಾಗಿ ಕಾರ್ಯನಿರ್ವಹಿಸಲು ಸಮನ್ವಯ ಸಭೆಗಳನ್ನು ನಡೆಸಲಾಗುತ್ತಿದೆ ಎಂದು ಅಶೋಕ್ ತಿಳಿಸಿದರು.


Share this with Friends

Related Post