Wed. Mar 18th, 2026

ಮಳೆಗಾಲಕ್ಕೂ ಮುನ್ನ ರಾಜಕಾಲುವೆ ಕಾಮಗಾರಿ ಪೂರ್ಣಗೊಳಿಸಿ: ಬಿಬಿಎಂಪಿ ಮುಖ್ಯ ಆಯುಕ್ತರ ಗಡುವು

Share this with Friends

ಬೆಂಗಳೂರು: ನಗರದಲ್ಲಿ ಮಳೆಗಾಲ ಆರಂಭವಾಗುವ ಮುನ್ನವೇ ಎಲ್ಲಾ ರಾಜಕಾಲುವೆ ಅಭಿವೃದ್ಧಿ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಬೆಂಗಳೂರು ಉತ್ತರ ನಗರ ಪಾಲಿಕೆ ವ್ಯಾಪ್ತಿಯ ವಿವಿಧೆಡೆ ಭೇಟಿ ನೀಡಿ ಪ್ರಗತಿ ಪರಿಶೀಲನೆ ನಡೆಸಿದ ಅವರು, ಮಳೆನೀರು ಸರಾಗವಾಗಿ ಹರಿಯುವಂತೆ ಮಾಡಲು ಕೈಗೊಂಡಿರುವ ಕ್ರಮಗಳನ್ನು ವೀಕ್ಷಿಸಿದರು.

ವೇಗ ಪಡೆದ ಬೃಹತ್ ಯೋಜನೆಗಳು:

NDMF ಯೋಜನೆಯಡಿ ₹175 ಕೋಟಿ ಹಾಗೂ KWSRP ಅಡಿಯಲ್ಲಿ ₹2000 ಕೋಟಿ ವೆಚ್ಚದಲ್ಲಿ ರಾಜಕಾಲುವೆಗಳ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ. ಒಂದು ಕೆರೆಯಿಂದ ಮತ್ತೊಂದು ಕೆರೆಗೆ ಸಂಪರ್ಕ ಕಲ್ಪಿಸುವ ಕಾಲುವೆಗಳ ನಿರ್ಮಾಣವನ್ನು ಚುರುಕುಗೊಳಿಸಲಾಗಿದ್ದು, ಮೇ ತಿಂಗಳ ಪೂರ್ವ ಮಾನ್ಸೂನ್‌ ಮಳೆಗೆ ಮುನ್ನ ಇವೆಲ್ಲವೂ ಸಿದ್ಧವಾಗಬೇಕು ಎಂದು ಆಯುಕ್ತರು ತಿಳಿಸಿದರು.

ಪರಿಸರ ಸ್ನೇಹಿ ಶುದ್ಧೀಕರಣಕ್ಕೆ ಆದ್ಯತೆ:

ಕೆರೆಗಳಿಗೆ ಕೊಳಚೆ ನೀರು ಸೇರುವುದನ್ನು ತಡೆಯಲು ‘ಜಕ್ಕೂರು ಕೆರೆ ಮಾದರಿ’ಯನ್ನು ಅನುಸರಿಸಲು ನಿರ್ಧರಿಸಲಾಗಿದೆ. ಪ್ರಕೃತಿ ಆಧಾರಿತ ಪರಿಹಾರಗಳಾದ (Nature-based solutions) ಕೊಲೊಕೇಸಿಯಾ (Colocasia) ಮತ್ತು ಕ್ಯಾನಾ ಇಂಡಿಕಾ (Canna indica) ಸಸಿಗಳನ್ನು ನೆಡುವ ಮೂಲಕ ನೈಸರ್ಗಿಕವಾಗಿ ನೀರು ಶುದ್ಧೀಕರಿಸುವ ತಂತ್ರಜ್ಞಾನಕ್ಕೆ ಒತ್ತು ನೀಡಲಾಗಿದ್ದು ಇದನ್ನೆಲ್ಲಾ ಆಯುಕ್ತರು ಪರಿಶೀಲಿಸಿದರು.

ಪರಿಶೀಲನೆ ನಡೆಸಿದ ಪ್ರಮುಖ ಸ್ಥಳಗಳು:

ಶ್ರೀನಿವಾಸಪುರ – ಕೋಗಿಲು ಕೆರೆ: 1.1 ಕಿ.ಮೀ ಕಾಲುವೆ ಮತ್ತು ಸ್ಲೂಯಿಸ್ ಗೇಟ್ ಅಳವಡಿಕೆ.

ಬೆಳ್ಳಳ್ಳಿ – ಕಣ್ಣೂರು: 660 ಮೀಟರ್ ಹೊಸ ಕಾಲುವೆ ನಿರ್ಮಾಣದ ಮೂಲಕ ಜಲಾವೃತ ಸಮಸ್ಯೆಗೆ ಮುಕ್ತಿ.

ದಾಸರಹಳ್ಳಿ: ಇಲ್ಲಿನ ಬಫರ್ ವಲಯವನ್ನು ಪಾದಚಾರಿ ಸ್ನೇಹಿಯಾಗಿ ಅಭಿವೃದ್ಧಿಪಡಿಸಲು ಹಾಗೂ ಸಾರ್ವಜನಿಕ ಸ್ಥಳವಾಗಿ ಮಾರ್ಪಡಿಸಲು ಯೋಜನೆ ಸಿದ್ಧಪಡಿಸಲು ಸೂಚಿಸಿದರು.

ನಾಗವಾರ ಜಂಕ್ಷನ್: ಈ ಭಾಗದಲ್ಲಿ ಮಳೆನೀರು ನಿಲ್ಲದಂತೆ ತಡೆಯಲು ವಿಶೇಷ ಕಾಲುವೆ ನಿರ್ಮಾಣಕ್ಕೆ ಆದೇಶಿಸಿದರು.

ಈ ಸಂದರ್ಭದಲ್ಲಿ ಯೋಜನಾ ಅನುಷ್ಠಾನ ವಿಭಾಗದ ಮುಖ್ಯ ಅಭಿಯಂತರ ರಾಜೇಶ್ ಸೇರಿದಂತೆ ಹಲವು ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

 


Share this with Friends

Related Post