ಬೆಂಗಳೂರು,ಜೂ.7: ಬಿಜೆಪಿ ವಿರುದ್ಧ ಸುಳ್ಳು ಜಾಹೀರಾತು ಆರೋಪ ಪ್ರಕರಣದಲ್ಲಿ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿಗೆ ಅವರಿಗೆ ರಿಲೀಫ್ ಸಿಕ್ಕಿದೆ.
ಖುದ್ದು ಹಾಜರಾಗಿದ್ದ ರಾಹುಲ್ ಗಾಂಧಿಗೆ ಜನಪ್ರತಿನಿಧಿಗಳ ನ್ಯಾಯಾಲಯ ಷರತ್ತುಬದ್ಧ ಜಾಮೀನು ನೀಡಿದ್ದು, ಜುಲೈ 30ಕ್ಕೆ ವಿಚಾರಣೆ ಮುಂದೂಡಿತು.
ಬಿಜೆಪಿ ವಿರುದ್ಧ ಶೇ.40 ಕಮಿಷನ್ ಆರೋಪ ಸೇರಿದಂತೆ ಸುಳ್ಳು ಜಾಹೀರಾತುಗಳನ್ನು ನೀಡಿದ ಆರೋಪ ಪ್ರಕರಣದಲ್ಲಿ ರಾಹುಲ್ ಗಾಂಧಿ ಇಂದು ಖುದ್ದು ನ್ಯಾಯಾಲಯಕ್ಕೆ ಹಾಜರಾಗಿದ್ದರು.
42ನೇ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ಮುಂದೆ ಹಾಜರಾಗಿ ಕಟಕಟೆಯಲ್ಲಿ ನಿಂತಿದ್ದರು. ರಾಹುಲ್ ಅರ್ಜಿಯನ್ನ ಪುರಸ್ಕರಿಸಿದ ನ್ಯಾಯಾಲಯ ಷರತ್ತುಬದ್ಧ ಜಾಮೀನು ನೀಡಿತು.
ಅಲ್ಲದೇ ಜುಲೈ 30ಕ್ಕೆ ವಿಚಾರಣೆ ಮುಂದೂಡಿದೆ. ಮಾಜಿ ಸಂಸದ ಡಿ.ಕೆ ಸುರೇಶ್, ರಾಹುಲ್ ಗಾಂಧಿ ಅವರಿಗೆ 50 ಸಾವಿರ ರೂ. ಮೌಲ್ಯದ ಪ್ರಾಪರ್ಟಿ ಶ್ಯೂರಿಟಿ ನೀಡಿದ್ದು, ಜಾಮೀನು ಮಂಜೂರು ಮಾಡಲಾಗಿದೆ.
ನ್ಯಾಯಾಲಯಕ್ಕೆ ರಾಹುಲ್ ಜೊತೆಗೆ ಡಿಕೆಶಿ, ಸಿದ್ದರಾಮಯ್ಯ ಜೊತೆಯಾಗಿ ಆಗಮಿಸಿ ಪ್ರಕ್ರಿಯೆ ಮುಗಿಸಿ ಜೊತೆಯಲ್ಲಿ ತೆರಳಿದರು
ಬಿಜೆಪಿ ಪರಿಷತ್ ಸದಸ್ಯ ಕೇಶವ ಪ್ರಸಾದ್ ನೀಡಿದ್ದ ಖಾಸಗಿ ದೂರನ್ನ ಜನಪ್ರತಿನಿಧಿಗಳ ನ್ಯಾಯಾಲಯ ವಿಚಾರಣೆಗೆ ಅಂಗೀಕರಿಸಿತ್ತು. ಈ ಹಿನ್ನೆಲೆಯಲ್ಲಿ ಆರೋಪಗಳಿಗೆ ಸಮನ್ಸ್ ಜಾರಿಗೊಳಿಸಲಾಗಿತ್ತು.
ಜೂ.1ರಂದು ವಿಚಾರಣೆ ನಡೆಸಿದ್ದ 42ನೇ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ ಶಿವಕುಮಾರ್ ಅವರಿಗೆ ಜಾಮೀನು ಮಂಜೂರು ಮಾಡಿತ್ತು.
ಆದರೆ ಎರಡು ಬಾರಿ ವಿಚಾರಣೆಗೆ ವಿನಾಯಿತಿ ಪಡೆದು ಗೈರಾಗಿದ್ದ ರಾಹುಲ್ ಗಾಂಧಿಗೆ ಜೂನ್ 7 ರಂದು ಕಡ್ಡಾಯವಾಗಿ ವಿಚಾರಣೆಗೆ ಹಾಜರಾಗಬೇಕೆಂದು ಆದೇಶಿಸಿತ್ತು. ಈ ಹಿನ್ನೆಲೆಯಲ್ಲಿ ಕೋರ್ಟ್‌ಗೆ ಖುದ್ದು ಹಾಜರಾದ ರಾಹುಲ್ ಗಾಂಧಿ ಜಾಮೀನು ಪ್ರಕ್ರಿಯೆ ಮುಗಿಸಿದ್ದಾರೆ.
ನ್ಯಾಯಾಲಯಕ್ಕೆ ಬರುವ ಮೊದಲು ರಾಹುಲ್ ಗಾಂಧಿ ರಣದೀಪ್ ಸಿಂಗ್ ಸುರ್ಜೇವಾಲ ಅವರೊಂದಿಗೆ ಕೆಪಿಸಿಸಿ ಕಚೇರಿಗೆ ಆಗಮಿಸಿ ಸಿಎಂ ಸಿದ್ದರಾಮಯ್ಯ,ಡಿಸಿಎಂ ಡಿ.ಕೆ.ಸುರೇಶ್ ಸೇರಿದಂತೆ ಕಾಂಗ್ರೆಸ್ ಪ್ರಮುಖರೊಂದಿಗೆ ಸಭೆ ನಡೆಸಿದರು.