Sat. Dec 28th, 2024

ಮೈಸೂರು ನಗರ, ಜಿಲ್ಲಾ ಬ್ರಾಹ್ಮಣ ಸಂಘದಿಂದ ದ್ವಾರಕೀಶ್ ಗೆ ಶ್ರದ್ಧಾಂಜಲಿ

Share this with Friends

ಮೈಸೂರು,ಏ.17: ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ವತಿಯಿಂದ ನಟ,ನಿರ್ಮಾಪಕ ದ್ವಾರಕೀಶ್ ಅವರಿಗೆ ಭಾವಪೂರ್ಣ ಶ್ರಧ್ದಂಜಲಿ‌ ಸಲ್ಲಿಸಲಾಯಿತು.

ಕನ್ನಡ ನಾಡಿನ ಕಲೆಯ ನೆಲೆಯಾಗಿ ಕನ್ನಡ ಚಿತ್ರರಂಗಕ್ಕೆ ಶಕ್ತಿ ತುಂಬಿ ಬೆಳೆಸಿದ ಧೀಮಂತ ನಟ, ನಿರ್ಮಾಪಕ, ನಿರ್ದೇಶಕ ದ್ವಾರಕೀಶ್ ಅವರ ಅಗಲಿಕೆ ಸಾಕಷ್ಟು ನೋವು ತಂದಿದೆ ಎಂದು ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷರಾದ ಡಿ.ಟಿ ಪ್ರಕಾಶ್ ಹೇಳಿದರು.

ನಗರದ ಇಟ್ಟಿಗೆ ಗೂಡಿನಲ್ಲಿರುವ ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ಆವರಣದಲ್ಲಿ ಆಯೋಜಿಸಿದ್ದ ನಟ ದ್ವಾರಕೀಶ್ ರವರ ಶ್ರದ್ಧಾಂಜಲಿ ಸಭೆಯಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಬಳಿಕ ಮಾತನಾಡಿದವರು.

ಮೈಸೂರು ಕಲಾವಿದರ ತವರೂರು. ದ್ವಾರಕೀಶ್ ರವರು ಮೈಸೂರಿನ ಹುಣಸೂರಿನವರು ಎನ್ನುವುದು ನಮ್ಮ ಹೆಮ್ಮೆ, ಡಿ.ಬನುಮಯ್ಯ, ಶಾರದವಿಲಾಸ ಸಿಪಿಸಿ ಪಾಲಿಟೆಕ್ನಿಕ್ ನಲ್ಲಿ ವ್ಯಾಸಾಂಗ ಮಾಡಿ ಮೈಸೂರಿನ ಗಾಂಧಿ ವೃತ್ತದಲ್ಲಿ ಭಾರತ್ ಆಟೋ ಸ್ಪೇರ್ಸ್ ಆಟೋ ಮೊಬೈಲ್ ಉದ್ಯಮ ಪ್ರಾರಂಭಿಸಿದ್ದ ದ್ವಾರಕೀಶ್ ರವರು ಅವರ ಸೋದರ ಮಾವ ಹುಣಸೂರು ಕೃಷ್ಣಮೂರ್ತಿ ರವರಿಂದ ಕನ್ನಡ ಚಿತ್ರರಂಗದಲ್ಲಿ ಆಸಕ್ತಿಹೊಂದಿ ಅತ್ಯುತ್ತಮ ಸಾಧನೆಯನ್ನ ಮಾಡಿದ್ದಾರೆ ಎಂದು ಹೇಳಿದರು.

ವಿದೇಶದಲ್ಲಿ ಪ್ರಪ್ರಥಮ ಕನ್ನಡ ಚಿತ್ರದ ಚಿತ್ರೀಕರಣ ಮಾಡಿರುವುದು ಅವರ ಸಾಧನೆಯಾಗಿದೆ, ಡಾ. ರಾಜಕುಮಾರ್ ಮತ್ತು ಡಾ. ವಿಷ್ಣುವರ್ಧನ್ ರವರ ಚಿತ್ರವೆಂದರೆ ಅಲ್ಲಿ ದ್ವಾರಕೀಶ್ ರವರ ಪಾತ್ರ ಅಭಿನಯ ಮೆರಗು ತರುತ್ತಿತ್ತು‌‌ ಎಂದು ಸ್ಮರಿಸಿದರು.

ನಟ ನಿರ್ದೇಶಕ ನಿರ್ಮಾಪಕರಾಗಿದ್ದ ದ್ವಾರಕೀಶ್ ರವರ ನೆನಪು ಮೈಸೂರಿನಲ್ಲಿ ಶಾಶ್ವತವಾಗಿ ಉಳಿಯಲು ಕರ್ನಾಟಕ ಸಾರ್ಕಾರ ಕಲಾರಂಗದ ಮೂಲಕ ವಿವಿಧ ಯೋಜನೆಗಳನ್ನ ಜಾರಿಗೆ ತರಲಿ ಎಂದು ಸಲಹೆ ನೀಡಿದರು ಡಿ.ಟಿ ಪ್ರಕಾಶ್.

ಬ್ರಾಹ್ಮಣ ಸಮುದಾಯದ ಮುಖಂಡರಾದ ಎಂ ಆರ್ ಬಾಲಕೃಷ್ಣ, ಹರೀಶ್, ಕಡಕೋಳ ಜಗದೀಶ್, ರಂಗನಾಥ್,ಪ್ರಶಾಂತ್, ಸುಚಿಂದ್ರ,ಚಕ್ರಪಾಣಿ, ಮಂಜುನಾಥ್, ಲತಾ ಬಾಲಕೃಷ್ಣ, ನಾಗಶ್ರೀ ಸುಚಿಂದ್ರ ಮತ್ತಿತರ ವಿಪ್ರ ಮುಖಂಡರು ಹಾಜರಿದ್ದರು.


Share this with Friends

Related Post