ಬೆಂಗಳೂರು,ಮೇ.15: ಪ್ರಜ್ವಲ್ ರೇವಣ್ಣ ಪೆನ್‌ಡ್ರೈವ್ ಪ್ರಕರಣದಲ್ಲಿ ಕಾಂಗ್ರೆಸ್ ಕೈವಾಡ ಇದೆ ಎಂದು ಪ್ರತಿಪಕ್ಷ ನಾಯಕ
ಆರ್.ಅಶೋಕ ಆರೋಪಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಪ್ರಕರಣವ್ವನ್ನು ಬಿಜೆಪಿ ತಲೆಗೆ ಕಟ್ಟುವ ಪ್ರಯತ್ನವನ್ನು ಕಾಂಗ್ರೆಸ್‌ನ ಹಿರಿಯ ನಾಯಕರು ಮಾಡುತ್ತಿದ್ದಾರೆ ದೂರಿದರು.
ಮಾಜಿ ಸಚಿವ ರೇವಣ್ಣ ಅವರನ್ನು ಕೂಡಲೇ ಬಂಧಿಸಿದ್ದರೂ, ಚಾಲಕನನ್ನು ಬಂಧಿಸಲೇ ಇಲ್ಲ, ಎಸ್ಐಟಿ ಅಧಿಕಾರಿಗಳು ಪಕ್ಷಪಾತ ಧೋರಣೆಯಿಂದ ಕೆಲಸ ಮಾಡುತ್ತಿದ್ದಾರೆ ಎಂದು ಟೀಕಿಸಿದರು.
ಎಚ್.ಡಿ.ಕುಮಾರಸ್ವಾಮಿ ಅವರು ಹೇಳಿದಂತೆ ಇಲ್ಲಿ ತಿಮಿಂಗಿಲವೇ ಇದೆ. ಅದನ್ನು ಬಡಿದು ತಿನ್ನಬೇಕಾ ಬೇಡವಾ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಕುಟುಂಬ ತೀರ್ಮಾನಿಸಲಿದೆ ಎಂದು ಮಾರ್ಮಿಕವಾಗಿ ನುಡಿದರು.
ತನಿಖೆಯ ಪ್ರತಿ ಮಾಹಿತಿ ಮೊದಲು ಕಾಂಗ್ರೆಸ್ ನಾಯಕರಿಗೆ ತಲುಪುತ್ತಿದೆ. ಎಸ್‌ಐಟಿ ಅಧಿಕಾರಿಗಳು ಕಾಂಗ್ರೆಸ್ ನಾಯಕರು ಹೇಳಿದಂತೆ ಕೇಳುತ್ತಿದ್ದಾರೆ ಕೂಡಲೇ ಈ ಪ್ರಕರಣವನ್ನು ಸಿಬಿಐಗೆ ವಹಿಸಬೇಕು,ಆ ನಂತರ ಯಾರೆಲ್ಲ ಬಂಧನಕ್ಕೊಳಗಾಗುತ್ತಾರೆ ಎಂಬುದನ್ನು ನೋಡಲಿ ಎಂದು ಮಾರ್ಮಿಕವಾಗಿ ನುಡಿದರು.
ಕಾರು ಚಾಲಕನನ್ನು ಕಾಂಗ್ರೆಸ್‌ನವರೇ ಎಲ್ಲೋ ಇರಿಸಿದ್ದಾರೆ, ಹಾಸನದಲ್ಲಿ ಎಲ್ಲ ಕಡೆ ಪೆನ್‌ಡ್ರೈವ್ ಹಂಚಲಾಗಿದೆ ಎಂದ ಮೇಲೆ ಅದು ಬಿಜೆಪಿ ಕಾರ್ಯಕರ್ತರಿಗೂ ತಲುಪಿರಬಹುದು, ಕಾಂಗ್ರೆಸ್ ಕಾರ್ಯಕರ್ತರ ಬಳಿಯೂ ವೀಡಿಯೋ ಇದೆ,ಹಾಗೆ ನೋಡಿದರೆ ಕಾಂಗ್ರೆಸ್ ಕಾರ್ಯಕರ್ತರನ್ನು
ಕೂಡ ಬಂಧಿಸಬೇಕಿತ್ತು ಎಂದು ಅಶೋಕ್ ತರಾಟೆಗೆ ತೆಗೆದುಕೊಂಡರು.
ಕಳೆದ ಬಾರಿ ಕಾಂಗ್ರೆಸ್ ಶಾಸಕರು ಬಿಜೆಪಿಗೆ ಬಂದಾಗ ಕಾಂಗ್ರೆಸ್ ನಾಯಕರು ಏನೂ ಮಾಡಲಿಲ್ಲ. ಆಗ ಬಂದಂತೆ ಮುಂದೆಯೂ ಬರುತ್ತಾರೆ. ಫಲಿತಾಂಶ ಬಂದ ಬಳಿಕ ಎಲ್ಲವೂ ಗೊತ್ತಾಗುತ್ತದೆ ಎಂದು ಮಾರ್ಮಿಕವಾಗಿ ನುಡಿದರು.