Fri. Nov 1st, 2024

ಸೋಲಿನ ಭಯದಲ್ಲಿ ಕಾಂಗ್ರೆಸ್ ಬ್ಯಾಂಕ್ ಖಾತೆಗಳು ಸೀಜ್: ಬಿಜೆಪಿ ವಿರುದ್ಧ ಸಿಎಂ ಕಿಡಿ

Share this with Friends

ಬೆಂಗಳೂರು, ಮಾ. 22: ಸೋಲಿನ ಭಯದಲ್ಲಿ ಕಾಂಗ್ರೆಸ್ ಬ್ಯಾಂಕ್ ಖಾತೆಗಳನ್ನು ಬಿಜೆಪಿ ಸೀಜ್ ಮಾಡಿದೆ ಎಂದು ‌ಸಿಎಂ ಸಿದ್ದರಾಮಯ್ಯ ಅಸಮಾಧಾನ ವ್ಯಕ್ತಪಡಿಸಿದರು.

ಈ ಬಾರಿ ಬಿಜೆಪಿಯನ್ನು ದೇಶದ ಜನ ಸ್ಪಷ್ಟವಾಗಿ ತಿರಸ್ಕರಿಸಿ ಭಾರತವನ್ನು ಉಳಿಸುತ್ತಾರೆ ಎಂದು ಹೇಳಿದರು.

ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಅವರು,ಬ್ರಿಟೀಷರನ್ನು ಭಾರತದಿಂದ ಓಡಿಸಲು ಸುದೀರ್ಘ ಹೋರಾಟ ನಡೆಸಿ ಹುತಾತ್ಮರಾದ, ಜೈಲು ಸೇರಿದ ಚರಿತ್ರೆ ಇರುವ ಪಕ್ಷ ಕಾಂಗ್ರೆಸ್. ಬಿಜೆಪಿ ನಮಗೆ ಎಷ್ಟೇ ತೊಂದರೆ ಕೊಟ್ಟರೂ ಕಾಂಗ್ರೆಸ್ ಕಾರ್ಯಕರ್ತರು ಹೋರಾಟದ ಹಾದಿಯಲ್ಲೇ ಎಲ್ಲವನ್ನೂ ಎದುರಿಸಲಿದ್ದಾರೆ ಎಂದು ತಿಳಿಸಿದರು.

ಪ್ರಜಾಪ್ರಭುತ್ವದಲ್ಲಿ ಜನಾಭಿಪ್ರಾಯ ಅಂತಿಮ, ಕಾಂಗ್ರೆಸ್ ಜನರಿಂದ ಹಣ ಸಂಗ್ರಹಿಸಿದೆ,ಜನರು ಸ್ವಯಂಪ್ರೇರಿತವಾಗಿ ಕೊಟ್ಟ ಹಣ ಕಾಂಗ್ರೆಸ್ ಖಾತೆಯಲ್ಲಿತ್ತು,ಸಣ್ಣ ತಾಂತ್ರಿಕ ಕಾರಣ ನೀಡಿ ಇಡೀ ಖಾತೆಯನ್ನು ಸೀಜ್ ಮಾಡಿರುವುದು ಸರ್ವಾಧಿಕಾರಿ ಧೋರಣೆ ಎಂದು ಕಿಡಿ ಕಾರಿದರು.

ಕಾಂಗ್ರೆಸ್ ಪಕ್ಷ ಚುನಾವಣೆ ನಡೆಸದಂತೆ ಬಿಜೆಪಿ ಈ ರೀತಿಯ ತೊಂದರೆ ಕೊಡುವುದು ಪ್ರಜಾಪ್ರಭುತ್ವಕ್ಕೆ ಮಾರಕ,ಇದು ಖಂಡನೀಯ ಎಂದು ಸಿದ್ದರಾಮಯ್ಯ ಹೇಳಿದರು.

ಸಿಎಎ, ಪುಲ್ವಾಮಾ, ಅಯೋಧ್ಯೆ ಹೆಸರಲ್ಲಿ ಇನ್ನೂ ಎಷ್ಟು ವರ್ಷ ಭಾರತೀಯರನ್ನು ಭಾವನಾತ್ಕವಾಗಿ ಮರಳು ಮಾಡ್ತೀರಿ ಜನರ ಬದುಕಿನ ಸಮಸ್ಯೆಗಳಿಗೆ ನೆಪಕ್ಕೂ ಸ್ಪಂದಿಸದ ನೀವು ಕೇವಲ ಭಾವನಾತ್ಮಕವಾಗಿ ಕೆರಳಿಸುತ್ತಾ ಇದ್ದೀರಿ, ಆದರೆ ಜನತೆ ಅಧಿಕಾರದಿಂದ ಕೆಳಗಿಳಿಸಲಿದ್ದಾರೆ ಎಂದು ಎಚ್ಚರಿಸಿದರು.

ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸೇರಿದಂತೆ ಅನೇಕ ಮುಖಂಡರು ಉಪಸ್ಥಿತರಿದ್ದರು.

ಇದೇ‌ ವೇಳೆ ವಿವಿಧ ಪಕ್ಷಗಳ ಮುಖಂಡರು ಕಾಂಗ್ರೆಸ್ ಗೆ ಸೇರ್ಪಡಿಗೊಂಡರು.ಡಿ.ಕೆ.ಶಿವಕುಮಾರ್ ಹಾಗೂ‌‌ ಸಿದ್ದರಾಮಯ್ಯ ಬರಮಾಡಿಕೊಂಡರು.


Share this with Friends

Related Post