Thu. Mar 5th, 2026

ಅಭಿವೃದ್ಧಿ ಮರೆತ ಕಾಂಗ್ರೆಸ್ ಸರ್ಕಾರ: ಬಿ.ವೈ.ವಿಜಯೇಂದ್ರ ವಾಗ್ದಾಳಿ

Share this with Friends

ಚಿಕ್ಕೋಡಿ: “ಅಧಿಕಾರಕ್ಕೆ ಬರುವ ಮುನ್ನ ಅಹಿಂದ ಪರ ಜಪ ಮಾಡುತ್ತಿದ್ದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ, ಕಳೆದ ಮೂರು ವರ್ಷಗಳಲ್ಲಿ ಅಭಿವೃದ್ಧಿಯನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದೆ” ಎಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಶಾಸಕ ಬಿ.ವೈ.ವಿಜಯೇಂದ್ರ ಆರೋಪಿಸಿದರು.

ಚಿಕ್ಕೋಡಿ ಜಿಲ್ಲಾ ಬಿಜೆಪಿ ವತಿಯಿಂದ ಯಕ್ಸಾಂಬಾ ಪಟ್ಟಣದಲ್ಲಿ ಆಯೋಜಿಸಿದ್ದ ಜಾಗೃತಿ ಸಮಾವೇಶದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ರಾಜ್ಯದಲ್ಲಿ ಕಳೆದ ಮೂರು ವರ್ಷಗಳಿಂದ ಅಭಿವೃದ್ಧಿ ಕಾರ್ಯಗಳಿಗೆ ಒಂದು ರೂಪಾಯಿಯೂ ಬಿಡುಗಡೆಯಾಗಿಲ್ಲ. ಕೇವಲ ಗ್ಯಾರಂಟಿಗಳ ಹೆಸರಿನಲ್ಲಿ ಕಾಲಹರಣ ಮಾಡುತ್ತಿರುವ ಸರ್ಕಾರಕ್ಕೆ ಹಣದ ಕೊರತೆ ಎದುರಾಗಿದ್ದು, ಅದನ್ನು ಸರಿದೂಗಿಸಲು ಹಳ್ಳಿ ಹಳ್ಳಿಗಳಲ್ಲಿ ಮದ್ಯದ ಅಂಗಡಿಗಳನ್ನು ತೆರೆಯಲು ಮುಂದಾಗಿದೆ ಎಂದು ಟೀಕಿಸಿದರು.

ಶಾಸಕರಲ್ಲೇ ಅಸಮಾಧಾನ:

“ಕ್ಷೇತ್ರಗಳ ಅಭಿವೃದ್ಧಿಗೆ ಅನುದಾನ ನೀಡದ ಕಾರಣ ಆಡಳಿತ ಪಕ್ಷದ ಶಾಸಕರೇ ಮುಖ್ಯಮಂತ್ರಿಗಳ ವಿರುದ್ಧ ತಿರುಗಿಬಿದ್ದಿದ್ದಾರೆ. ಇಂತಹ ಶೋಚನೀಯ ಸ್ಥಿತಿ ಕರ್ನಾಟಕದ ರಾಜಕೀಯದಲ್ಲಿ ಹಿಂದೆಂದೂ ನಿರ್ಮಾಣವಾಗಿರಲಿಲ್ಲ. ಬಡವರು, ರೈತರು ಮತ್ತು ಯುವಜನರ ಹಿತ ಕಾಯುವಲ್ಲಿ ಸರ್ಕಾರ ವಿಫಲವಾಗಿದೆ” ಎಂದು ಅವರು ಕಿಡಿಕಾರಿದರು.

ಕಲ್ಯಾಣ ಕರ್ನಾಟಕದ ಬಗ್ಗೆ ಕೇವಲ ಭಾಷಣ ಮಾಡುವ ಸಿಎಂ ಸಿದ್ದರಾಮಯ್ಯ ಅವರು, ಬಡವರಿಗಾಗಿ ಒಂದೂ ಹೊಸ ಯೋಜನೆಯನ್ನು ಜಾರಿಗೆ ತಂದಿಲ್ಲ ಎಂದು ವಿಜಯೇಂದ್ರ ದೂರಿದರು.

ನರೇಗಾ ಹಿಂದೆ ಲೂಟಿ ಮಾಡುವ ಯೋಜನೆಯಾಗಿತ್ತು:  “ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ನರೇಗಾ ಯೋಜನೆ ಕೇವಲ ಹಣ ಲೂಟಿ ಮಾಡುವ ಮಾರ್ಗವಾಗಿತ್ತು” ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ. ರಾಜೀವ್ ಗಂಭೀರವಾಗಿ ಆಪಾದಿಸಿದರು. ದೇಶದಲ್ಲಿ ನರೇಗಾ ಅಡಿಯಲ್ಲಿ ಈವರೆಗೆ ಸುಮಾರು 5.5 ಲಕ್ಷ ಕೋಟಿ ರೂಪಾಯಿ ಖರ್ಚು ಮಾಡಲಾಗಿದೆ. ಇಷ್ಟು ದೊಡ್ಡ ಮೊತ್ತದಲ್ಲಿ ಅದೆಷ್ಟೋ ಐಐಟಿಗಳು, ಆಸ್ಪತ್ರೆಗಳು, ಅಂಗನವಾಡಿ ಹಾಗೂ ಹಾಸ್ಟೆಲ್‌ಗಳನ್ನು ನಿರ್ಮಿಸಬಹುದಿತ್ತು. ಆದರೆ, ಈ ಯೋಜನೆಯಲ್ಲಿನ ದೌರ್ಬಲ್ಯಗಳನ್ನು ಬಳಸಿಕೊಂಡು ಕಾಂಗ್ರೆಸ್ಸಿಗರು ಕೇವಲ ಹಣ ಲೂಟಿ ಮಾಡಿದರು ಎಂದು ದೂರಿದರು.

ಗುಂಡಿ ತೆಗೆಯಲು-ಮುಚ್ಚಲು ಹಣ ವ್ಯಯ:

“ಹಿಂದೆ ಕೇವಲ ಗುಂಡಿ ತೆಗೆಯಲು 10 ಸಾವಿರ ಕೋಟಿ ಹಾಗೂ ಅದನ್ನು ಮುಚ್ಚಲು 10 ಸಾವಿರ ಕೋಟಿ ವ್ಯಯಿಸಲಾಗುತ್ತಿತ್ತು. ಅಂತಿಮವಾಗಿ ಇವುಗಳಿಂದ ಯಾವುದೇ ಶಾಶ್ವತ ಆಸ್ತಿ ಸೃಜನೆಯಾಗುತ್ತಿರಲಿಲ್ಲ. ಅದೊಂದು ಉಪಯೋಗಶೂನ್ಯ ವ್ಯವಸ್ಥೆಯಾಗಿತ್ತು” ಎಂದು ಅವರು ಕಿಡಿಕಾರಿದರು.

ಮೋದಿ ನಿರ್ಧಾರಕ್ಕೆ ಶ್ಲಾಘನೆ:

ಕೇಂದ್ರದ ಬಿಜೆಪಿ ಸರ್ಕಾರವು ಈಗ ನರೇಗಾ ಯೋಜನೆಯಲ್ಲಿ ಅಮೂಲಾಗ್ರ ಬದಲಾವಣೆ ತಂದಿದೆ. ವಿಬಿ ಜಿ ರಾಮ್ ಜಿ ಯೋಜನೆಯಡಿ ಉದ್ಯೋಗದ ಅವಧಿಯನ್ನು 125 ದಿನಗಳಿಗೆ ಹೆಚ್ಚಿಸಲಾಗಿದೆ. ಕೃಷಿ ಅವಧಿಯಲ್ಲಿ ರಜಾ ದಿನಗಳನ್ನು ಘೋಷಿಸುವ ಮೂಲಕ ರೈತರಿಗೆ ಅನುಕೂಲ ಮಾಡಿಕೊಡಲಾಗಿದೆ. ಮೋದಿ ಸರ್ಕಾರದ ಈ ತೀರ್ಮಾನವು ಅತ್ಯಂತ ಸಮರ್ಪಕವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.

ಇದೇ ವೇಳೆ, ಕೇಂದ್ರದ ಯೋಜನೆಗಳ ಕುರಿತು ವಿಡಿಯೋಗಳ ಮೂಲಕ ಜನರಲ್ಲಿ ಜಾಗೃತಿ ಮೂಡಿಸಲು ಕಾರ್ಯಕರ್ತರಿಗೆ ಸಲಹೆ ನೀಡಿದರು


Share this with Friends

Related Post