Thu. Jan 9th, 2025

ಪಾಪರ್ ಆಗಿ ಅಭಿವೃದ್ಧಿ ಶೂನ್ಯವಾಗಿದ್ದರಿಂದ ಕಾಂಗ್ರೆಸ್ ಸೋತಿದೆ-ಅಶೋಕ್

Share this with Friends

ಬೆಂಗಳೂರು, ಜೂ.10: ಲೋಕಸಭೆ ಚುನಾವಣೆಯಲ್ಲಿ ಗ್ಯಾರಂಟಿಗಳಿಂದ ಕಾಂಗ್ರೆಸ್‌ಗೆ ಮತ ಬಂದಿಲ್ಲ,ಪಾಪರ್ ಆಗಿ ಅಭಿವೃದ್ಧಿ ಶೂನ್ಯವಾಗಿದ್ದರಿಂದ ಸೋತಿದೆ ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ್ ಟೀಕಿಸಿದ್ದಾರೆ

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ ಸರ್ಕಾರ ಮತಕ್ಕಾಗಿ ಗ್ಯಾರಂಟಿ ಜಾರಿ ಮಾಡಿದ್ದರಿಂದ ಈಗ ಸಾಲ ಮಾಡಿ ಸಂಬಳ ಕೊಡುವ ಪರಿಸ್ಥಿತಿ ಬಂದಿದೆ ಎಂದು ವ್ಯಂಗ್ಯ ವಾಡಿದರು.

ಗ್ಯಾರಂಟಿಗಳಿಂದ ಲೋಕಸಭೆ ಚುನಾವಣೆಯಲ್ಲಿ ಗೆಲ್ಲಲು ಸಾಧ್ಯವಾಗಿಲ್ಲ. ಶಾಸಕರು ಅನುದಾನ ಯಾವಾಗ ಕೊಡುತ್ತೀರಿ ಎಂದು ಪ್ರಶ್ನಿಸುತ್ತಿದ್ದಾರೆ. ಪಾಪರ್‌ ಆಗಿರುವ ಸರ್ಕಾರ ಎಲ್ಲ ಕಡೆ ಬಿಲ್‌ ಪಾವತಿ ಬಾಕಿ ಇರಿಸಿಕೊಂಡಿದೆ, ಅಭಿವೃದ್ಧಿ ಇಲ್ಲದೆ ಜನರು ಶಾಸಕರು ಹಾಗೂ ಸಚಿವರ ಮಾತಿಗೆ ವಿರುದ್ಧವಾಗಿ ಲೋಕಸಭೆ ಚುನಾವಣೆಯಲ್ಲಿ ಮತ ಚಲಾಯಿಸಿದ್ದಾರೆ ಎಂದು ಹೇಳಿದರು.

ಕಾಂಗ್ರೆಸ್‌ ಸರ್ಕಾರ ದಲಿತರ ಹಣ ಲೂಟಿ ಹೊಡೆದು, ಶೂನ್ಯ ಸಾಧನೆ ಮಾಡಿ, ಜನರ ಪಾಲಿಗೆ ಸತ್ತುಹೋಗಿದೆ. ಒಬ್ಬ ಸಚಿವರೂ ಮಳೆ ಹಾನಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿಲ್ಲ ಎಂದು ಅಶೋಕ್ ತರಾಟೆಗೆ ತೆಗೆದುಕೊಂಡರು.

ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರ ಸಹೋದರ ಡಿ.ಕೆ.ಸುರೇಶ್‌ ಕನಕಪುರದಲ್ಲಿ ಹೀನಾಯವಾಗಿ ಸೋತಿದ್ದಾರೆ, ರಾಜ್ಯದಲ್ಲಿ ಸರ್ಕಾರವಿದ್ದು, ಏಕೆ ಸೋತಿದ್ದೀರಿ ಎಂದು ರಾಹುಲ್‌ ಗಾಂಧಿ ಪ್ರಶ್ನಿಸಿದ್ದಾರೆ, ಲೋಕಸಭೆ ಚುನಾವಣೆ ಫಲಿತಾಂಶದಿಂದ ಸರ್ಕಾರ ಮೂಲೆ ಸೇರಿದೆ ಎಂದು ಟೀಕಿಸಿದರು.

ಮುಂದೆ ಹಾಲು, ಆಲ್ಕೋಹಾಲ್‌, ಬಸ್‌ ಟಿಕೆಟ್‌ ದರವನ್ನೂ ಹೆಚ್ಚಿಸಲು ಕಾಂಗ್ರೆಸ್‌ ಸಿದ್ಧತೆ ಮಾಡಿಕೊಂಡಿದೆ. ಸಿಎಂ ಸಿದ್ದರಾಮಯ್ಯ ಇನ್ನಷ್ಟು ಹೊಸ ತೆರಿಗೆಗಳನ್ನು ವಿಧಿಸಲಿದ್ದಾರೆ, ಇದೆಲ್ಲದರ ವಿರುದ್ಧವೂ ಬಿಜೆಪಿ ಪ್ರತಿಭಟಿಸಲಿದೆ ಎಂದು ಹೇಳಿದರು.

ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದ ಹಗರಣದ ಹಿಂದೆ ಕೇವಲ ಬಿ.ನಾಗೇಂದ್ರ ಇಲ್ಲ, ಇದರ ಹಿಂದೆ ದೊಡ್ಡ ನಾಯಕರೇ ಇದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಗೊತ್ತಿದ್ದೇ ಈ ಹಗರಣ ನಡೆದಿದೆ. ಇದರ ಜೊತೆ ಇನ್ನಷ್ಟು ಸಚಿವರೂ ಸೇರಿದ್ದಾರೆ. ಆದ್ದರಿಂದ ಮುಖ್ಯಮಂತ್ರಿ ಕೂಡ ರಾಜೀನಾಮೆ ನೀಡಬೇಕು ಎಂದು ಅಶೋಕ್ ಆಗ್ರಹಿಸಿದರು.


Share this with Friends

Related Post