Wed. Mar 18th, 2026

ಉಪಚುನಾವಣೆ ಗೆಲುವೇ ಕಾಂಗ್ರೆಸ್‌ನ ಏಕೈಕ ಮಾನದಂಡ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್

Share this with Friends

ಬೆಂಗಳೂರು: ದಾವಣಗೆರೆ ದಕ್ಷಿಣ ಹಾಗೂ ಬಾಗಲಕೋಟೆ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯು ಕಾಂಗ್ರೆಸ್‌ ಪಾಲಿಗೆ ಅತ್ಯಂತ ಪ್ರತಿಷ್ಠೆಯ ಕಣವಾಗಿದ್ದು, ಪಕ್ಷಕ್ಕೆ ಗೆಲುವೇ ಅಂತಿಮ ಮಾನದಂಡವಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ತಿಳಿಸಿದರು.

ನಗರದಲ್ಲಿ ನಡೆದ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಚುನಾವಣಾ ಉಸ್ತುವಾರಿ ಸಮಿತಿ ಸಭೆಯ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈ ಉಪಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಲಾಗಿದೆ ಎಂದರು.

ಎಂಟು ಹೆಸರುಗಳ ಚರ್ಚೆ:

“ದಾವಣಗೆರೆ ದಕ್ಷಿಣ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಇಂದಿನ ಸಭೆಯಲ್ಲಿ ಎಂಟು ಸಂಭಾವ್ಯ ಅಭ್ಯರ್ಥಿಗಳ ಹೆಸರುಗಳ ಬಗ್ಗೆ ಸುದೀರ್ಘವಾಗಿ ಚರ್ಚಿಸಲಾಗಿದೆ. ಟಿಕೆಟ್‌ಗಾಗಿ ಆಕಾಂಕ್ಷಿಗಳು ಬೇಡಿಕೆ ಇಡುವುದರಲ್ಲಿ ತಪ್ಪಿಲ್ಲ. ಆದರೆ, ಅಂತಿಮವಾಗಿ ಹೈಕಮಾಂಡ್ ತೆಗೆದುಕೊಳ್ಳುವ ತೀರ್ಮಾನಕ್ಕೆ ನಾವೆಲ್ಲರೂ ಬದ್ಧರಾಗಿರಬೇಕು,” ಎಂದು ಅವರು ಸ್ಪಷ್ಟಪಡಿಸಿದರು.

ದೂರದೃಷ್ಟಿಯ ಸಂಘಟನೆ:

ಕೇವಲ ಉಪಚುನಾವಣೆ ಮಾತ್ರವಲ್ಲದೆ, ಮುಂಬರುವ ಜಿಲ್ಲಾ ಮತ್ತು ತಾಲೂಕು ಪಂಚಾಯತ್ ಚುನಾವಣೆಗಳು ಹಾಗೂ 2028ರ ಸಾರ್ವತ್ರಿಕ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಪಕ್ಷವನ್ನು ಸಂಘಟಿಸಬೇಕಿದೆ. ಅಭ್ಯರ್ಥಿಗಳ ಆಯ್ಕೆ ಕುರಿತು ಮುಖ್ಯಮಂತ್ರಿಗಳು ಹಾಗೂ ಉಪಮುಖ್ಯಮಂತ್ರಿಗಳು ಹೈಕಮಾಂಡ್ ಜೊತೆ ಚರ್ಚಿಸಿ ಅಂತಿಮ ತೀರ್ಮಾನ ಪ್ರಕಟಿಸಲಿದ್ದಾರೆ ಎಂದು ಹೇಳಿದರು.

ಒಮ್ಮತದ ನಿರ್ಧಾರ:

ಅಭ್ಯರ್ಥಿಯ ಹೆಸರು ಘೋಷಣೆಯಾದ ನಂತರ ಯಾವುದೇ ಗೊಂದಲಗಳಿಗೆ ಅವಕಾಶವಿಲ್ಲ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಚುನಾವಣಾ ಕಣಕ್ಕಿಳಿಯಲಾಗುವುದು. ಒಮ್ಮೆ ಅಭ್ಯರ್ಥಿ ಫೈನಲ್ ಆದ ಮೇಲೆ ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತರು ಮತ್ತು ನಾಯಕರು ಒಗ್ಗಟ್ಟಿನಿಂದ ಕೆಲಸ ಮಾಡಲಿದ್ದಾರೆ ಎಂದು ಸಚಿವರು ವಿಶ್ವಾಸ ವ್ಯಕ್ತಪಡಿಸಿದರು.


Share this with Friends

Related Post