ಬೆಂಗಳೂರು,ಏ.23: ಬರ ಪರಿಹಾರ ವಿಳಂಬ ಖಂಡಿಸಿ ಕಾಂಗ್ರೆಸ್ ನಾಯಕರು ವಿಧಾನಸೌಧ ಗಾಂಧಿ ಪ್ರತಿಮೆ ಮುಂದೆ ಪ್ರತಿಭಟನೆ ನಡೆಸಿದರು.
ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸುರ್ಜೆವಾಲ, ಸಚಿವರಾದ ರಾಮಲಿಂಗ ರೆಡ್ಡಿ, ಕೆ.ಜೆ.ಜಾರ್ಜ್ , ಕೃಷ್ಣ ಬೈರೇಗೌಡ ಮತ್ತಿತರರು ಕೇಂದ್ರ ಸರ್ಕಾರದ ವಿರುದ್ದ ಪೋಸ್ಟರ್ ಪ್ರದರ್ಶಿಸಿ ಕಿಡಿಕಾರಿದರು.
ಬೇಡ ಬೇಡ ಖಾಲಿ ಚೊಂಬು ಬೇಡ. ಚೋಂಬೇಶ್ವರನಿಗೆ ಚೊಂಬು ಕೊಟ್ಟ ಮೋದಿಗೆ ಧಿಕ್ಕಾರ, ನರೇಂದ್ರ ಚೊಂಬೇಶ್ವರನಿಗೆ ಧಿಕ್ಕಾರ ಎಂದು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಕಾಂಗ್ರೆಸ್ ಪಕ್ಷದ ವತಿಯಿಂದ ಕರ್ನಾಟಕ ಬಗ್ಗೆ ಕೇಂದ್ರದ ಮಲತಾಯಿ ಧೋರಣೆ ಖಂಡಿಸಿ ಪ್ರತಿಭಟನೆ ಮಾಡಿದ್ದೇವೆ. ಮೋದಿ ಮತ್ತು ಅಮಿತ್ ಶಾ ಕರ್ನಾಟಕದ ರೈತರನ್ನು ದ್ವೇಷ ಮಾಡುತ್ತಿದ್ದಾರೆ. ಕರ್ನಾಟಕದ 220 ತಾಲೂಕಿನಲ್ಲಿ ಬರ ಇದೆ, ನಾವು ಗ್ಯಾರಂಟಿ ಯೋಜನೆಗೆ ದುಡ್ಡು ಕೇಳುತ್ತಿಲ್ಲ, ಬರದ ಪರಿಹಾರವನ್ನು ಕೇಳುತ್ತಿದ್ದೇವೆ ಎಂದು ಈ ವೇಳೆ ಸಿದ್ದರಾಮಯ್ಯ ಹೇಳಿದರು.
ಅಮಿತ್ ಶಾ ಹಾಗೂ ಮೋದಿ ಯಾವ ಮುಖ ಇಟ್ಟುಕೊಂಡು ರಾಜ್ಯಕ್ಕೆ ಬರುತ್ತಾರೆ, 18 ಸಾವಿರ ಕೋಟಿ ಬರ ಪರಿಹಾರ ಕೊಡದೇ ಸುಳ್ಳು ಹೇಳುತ್ತಿದ್ದಾರೆ. ಕರ್ನಾಟಕದ ಬಗ್ಗೆ ಮಲತಾಯಿ ಧೋರಣೆ ಯಾಕೆ,ಕನ್ನಡಿಗರ ಮೇಲೆ ದ್ವೇಷ ಯಾಕೆ ಎಂದು ಸಿಎಂ ವಾಗ್ದಾಳಿ ನಡೆಸಿದರು.