ಬೆಂಗಳೂರು, ಜೂ. 24:ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿ ಸಂವಿಧಾನಕ್ಕೆ ಅಪಚಾರ ಮಾಡಿದ ಕಾಂಗ್ರೆಸ್ ಜನರ ಕ್ಷಮೆ ಕೇಳಬೇಕು ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ ಆಗ್ರಹಿಸಿದರು.
ರಾಹುಲ್ ಗಾಂಧಿ ರಾಮ್‌ಲೀಲಾ ಮೈದಾನದಲ್ಲಿ ತಲೆಬಾಗಿ ನಿಂತು ಜನರ ಕ್ಷಮೆ ಕೇಳಲಿ ಎಂದು ಅವರು ಹೇಳಿದರು.
ಸ್ವಾತಂತ್ರ್ಯ ಉದ್ಯಾನದಲ್ಲಿ ಬಿಜೆಪಿ ತುರ್ತು ಪರಿಸ್ಥಿತಿ ಸಂಬಂಧ ರಾಹುಲ್ ಗಾಂಧಿ ಕ್ಷಮೆ ಕೋರಬೇಕೆಂಬ ಆಗ್ರಹದ ಪೋಸ್ಟರ್ ಅಭಿಯಾನದ ವೇಳೆ ಅವರು ಮಾತನಾಡಿದರು.
ಡಾ.ಬಿ.ಆರ್.ಅಂಬೇಡ್ಕರ್ ರಚಿಸಿದ ಸಂವಿಧಾನವನ್ನು ಮೂಲೆಗೆ ತಳ್ಳಿ ಸರ್ವಾಧಿಕಾರಿ ಧೋರಣೆ ತೋರಿದ ಕಾಂಗ್ರೆಸ್ ಪಕ್ಷ ಹಾಗೂ ಇಂದಿರಾಗಾಂಧಿ ರಾತ್ರೋರಾತ್ರಿ ತುರ್ತು ಪರಿಸ್ಥಿತಿ ಹೇರಿದ್ದರು. ನ್ಯಾಯಾಂಗ ವ್ಯವಸ್ಥೆಯನ್ನು ಕಪಿಮುಷ್ಟಿಗೆ ತೆಗೆದುಕೊಂಡು, ಪತ್ರಕರ್ತರನ್ನು ಜೈಲಿಗೆ ಹಾಕಿದ್ದರು. ಎಲ್.ಕೆ.ಅಡ್ವಾಣಿ, ಅಟಲ್ ಬಿಹಾರಿ ವಾಜಪೇಯಿ ಮೊದಲಾದ ಘಟಾನುಘಟಿ ನಾಯಕರನ್ನು ಜೈಲಿಗೆ ತಳ್ಳಿದ್ದರು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಂವಿಧಾನ ನಮಗೆ ಭಗವದ್ಗೀತೆಗೆ ಸಮಾನ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಆದರೆ ಸಂವಿಧಾನವನ್ನು ಕಾಂಗ್ರೆಸ್ ಬದಲಿಸಿದೆ ಎಂದು ಅಶೋಕ್ ಆಕ್ರೋಶ ವ್ಯಕ್ತಪಡಿಸಿದರು.