Mon. Dec 23rd, 2024

ಉಗ್ರರ ಬಗ್ಗೆ ಕಾಂಗ್ರೆಸ್‌ ಸಹಾನುಭೂತಿ ಮನೋಭಾವ ಆತಂಕಕಾರಿ- ಅಶೋಕ್‌

Share this with Friends

ಬೆಂಗಳೂರು, ಮಾ.3: ಸಮಾಜಘಾತುಕ ಶಕ್ತಿಗಳು ಹಾಗೂ ಉಗ್ರಗಾಮಿ ಸಂಘಟನೆಗಳು ನಡೆಸುತ್ತಿರುವ ದುಷ್ಕೃತ್ಯಗಳ ಬಗ್ಗೆ ಕಾಂಗ್ರೆಸ್‌ ಸರಕಾರ ಸಹಾನುಭೂತಿ ಮನೋಭಾವ ಪ್ರದರ್ಶಿಸುತ್ತಿರುವುದು ಆಘಾತಕಾರಿ ಎಂದು ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್‌. ಅಶೋಕ್‌ ಆತಂಕ ವ್ಯಕ್ತಪಡಿಸಿದರು.

ಲೋಕಸಭೆ ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು, ವೋಟ್‌ ಬ್ಯಾಂಕ್‌ ರಾಜಕಾರಣಕ್ಕಾಗಿ ದೇಶದ್ರೋಹ ಕೆಲಸ ಮಾಡುತ್ತಿರುವ ರಾಜ್ಯ ಸರಕಾರವನ್ನು ವಜಾ ಮಾಡುವಂತೆ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಗಿದೆ. ಜನವಿರೋಧಿ ಧೋರಣೆಯ ಈ ಸರಕಾರಕ್ಕೆ ಅಧಿಕಾರದಲ್ಲಿ ಮುಂದುವರಿಯುವ ನೈತಿಕತೆ ಇಲ್ಲ ಎಂದು ಹೇಳಿದರು.

ಮುಂಬರುವ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಪಕ್ಷದ ಪ್ರಣಾಳಿಕೆ ಸಿದ್ಧಪಡಿಸುವುದಕ್ಕೆ ಪೂರ್ವಭಾವಿಯಾಗಿ ಜನತೆಯಿಂದ ಅಭಿಪ್ರಾಯ ಸಂಗ್ರಹಿಸುವ ಸಂಕಲ್ಪ ಅಭಿಯಾನ ಕಾರ್ಯಕ್ರಮಕ್ಕೆ ಪಕ್ಷದ ಕಚೇರಿಯಲ್ಲಿ ಚಾಲನೆ ನೀಡಿದ ಬಳಿಕ ಸುದ್ದಿಗಾರರಿಗೆ ಅವರು ಮಾತನಾಡಿದರು.

ವಿಧಾನಸೌಧದಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿದ ಮತ್ತು ರಾಮೇಶ್ವರಂ ಕೆಫೆ ಬಾಂಬ್‌ ಸ್ಫೋಟ ಪ್ರಕರಣಗಳಲ್ಲಿ ಸರಕಾರ ನಡೆದುಕೊಳ್ಳುತ್ತಿರುವ ರೀತಿ ಕಳವಳಕಾರಿಯಾಗಿದೆ.

ದೇಶ ವಿದ್ರೋಹಿ ಶಕ್ತಿಗಳನ್ನೇ ಸಮರ್ಥನೆ ಮಾಡುವ, ದುಷ್ಕೃತ್ಯಗಳನ್ನು ಮುಚ್ಚಿಹಾಕುವ ಷಡ್ಯಂತ್ರ ನಡೆಸಲಾಗಿದೆ. ಅಲ್ಪಸಂಖ್ಯಾತರ ಓಲೈಕೆ ರಾಜಕಾರಣದಲ್ಲಿ ನಿರತವಾಗಿರುವ ಕಾಂಗ್ರೆಸ್‌ ಸರಕಾರ, ಇಂತಹ ಕೃತ್ಯಗಳಲ್ಲೂ ಕೀಳು ಮನೋಭಾವ ಪ್ರದರ್ಶಿಸುತ್ತಿರುವುದು ಆಘಾತವುಂಟು ಮಾಡಿದೆ ಎಂದು ಕಿಡಿಕಾರಿದರು.

ವಿಧಾನಸೌಧದಲ್ಲಿ ಪಾಕಿಸ್ತಾನ್‌ ಜಿಂದಾಬಾದ್‌ ಘೋಷಣೆ ಕೂಗಿ ಎಷ್ಟು ದಿನಗಳಾದರೂ ಒಬ್ಬನನ್ನೂ ಬಂಧಿಸಿಲ್ಲ. 25 ಮಂದಿ ಪ್ರವೇಶಕ್ಕೆ ಅನುಮತಿ ಪಡೆದಿದ್ದರೂ ನೂರಕ್ಕೂ ಹೆಚ್ಚು ಮಂದಿ ಒಳ ಪ್ರವೇಶಿಸಿದ್ದರು. ಇದಕ್ಕೆ ಅವಕಾಶ ನೀಡಿದ್ದು ಯಾರು, ಪೊಲೀಸರು ಇವರಿಗೆ ಅವಕಾಶ ಮಾಡಿಕೊಟ್ಟಿದ್ದು ಹೇಗೆ ಎಂದು ಅಶೋಕ್ ಕಿಡಿಕಾರಿದರು.

ಈ ಘಟನೆಗೆ ಸಂಬಂಧಿಸಿದಂತೆ ಸಿಎಂ ಆದಿಯಾಗಿ ಒಬ್ಬೊಬ್ಬ ಸಚಿವರು ಒಂದೊಂದು ರೀತಿ ಹೇಳಿಕೆ ನೀಡುತ್ತಿದ್ದಾರೆ. ಇವರ ನಡುವೆಯೇ ಸಮನ್ವಯ ಇಲ್ಲ. ಇದು ಮಾಧ್ಯಮಗಳ ಸೃಷ್ಟಿ ಎಂದು ಪ್ರಿಯಾಂಕ ಖರ್ಗೆ ಹೇಳಿದರೆ, ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್‌ ಅವರು ಆ ರೀತಿ ಘೋಷಣೆಯನ್ನೇ ಕೂಗಿಲ್ಲ ಎಂದು ತನಿಖೆಗೆ ಮೊದಲೇ ತೀರ್ಪು ನೀಡಿದ್ದಾರೆ. ಇವರು ವರದಿ ಬಹಿರಂಗಪಡಿಸಲು ತಡೆಯುತ್ತಿರುವ ಶಕ್ತಿಗಳು ಯಾವುದು ಇನ್ನೆಷ್ಟು ದಿನ ಈ ರೀತಿ ಮುಚ್ಚಿಟ್ಟು ನಾಟಕ ಆಡುತ್ತಾರೆ ಎಂದು ತರಾಟೆಗೆ ತೆಗೆದುಕೊಂಡರು.

ನಮ್ಮ ಸರಕಾರದ ಅವಧಿಯಲ್ಲಿ ಇಲಿಯಂತೆ ಬಾಲ ಮುದರಿ ಬಿಲ ಸೇರದ್ದವರು ಇಂದು ಹುಲಿಗಳಂತೆ ಬಿಲದಿಂದ ಆಚೆ ಬಂದು ದುಷ್ಕೃತ್ಯ ನಡೆಸುತ್ತಿದ್ದಾರೆ ಕಾಂಗ್ರೆಸ್‌ ಸರಕಾರದ ಮನಸ್ಥಿತಿ ಇದಕ್ಕೆ ಕಾರಣ ಎಂದು ಅಶೋಕ್‌ ಚಾಟಿ ಬೀಸಿದರು.


Share this with Friends

Related Post