ಬೆಂಗಳೂರು, ಏ.13: ಬೆಂಗಳೂರಿನ ಬಾಂಬ್ ಸ್ಫೋಟದ ತನಿಖೆಯನ್ನು ಕಾಂಗ್ರೆಸ್ ನಾಯಕರು ಸಚಿವರು ತಿರುಚಲು ಯತ್ನಿಸಿದ್ದಾರೆ ಎಂದು ಪ್ರತಿಪಕ್ಷದ ನಾಯಕ ಆರ್.ಅಶೋಕ್ ಆರೋಪಿಸಿದರು.
ಎನ್‌ಐಎ ತಂಡ ಸೂಕ್ತ ತನಿಖೆ ನಡೆಸಿ ಬಾಂಬ್ ಸ್ಪೋಟದ ಆರೋಪಿಗಳನ್ನು ಬಂಧಿಸಿರುವುದು ಅಭಿನಂದನೀಯ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭಯೋತ್ಪಾದಕ ದಾಳಿಯಿಂದ ರಾಜ್ಯದ ಜನರು ಆತಂಕಗೊಂಡಿದ್ದರು. ಆದರೆ ಸೂಕ್ತ ಸಮಯದಲ್ಲೇ ಉಗ್ರರನ್ನು ಬಂಧಿಸಿ ಮುಂದಿನ ಅನಾಹುತಗಳನ್ನು ಎನ್‌ಐಎ ತಪ್ಪಿಸಿದೆ ಎಂದು ತಿಳಿಸಿದರು.
ಕಾಂಗ್ರೆಸ್ ನಾಯಕರು ಈ ಘಟನೆಯನ್ನು ತಿರುಚುವ ಕೆಲಸ ಮಾಡಿದ್ದರು. ಅಲ್ಪಸಂಖ್ಯಾತರಿಗೆ ನೋವಾದರೆ ಮತಬ್ಯಾಂಕ್ ತಪ್ಪುತ್ತದೆ ಎಂಬ ಕಾರಣಕ್ಕೆ ಪೊಲೀಸರ ಮೇಲೆ ಒತ್ತಡ ಹಾಕಿದ್ದರು.
ಇದು ವೈಯಕ್ತಿಕ, ವ್ಯಾಪಾರ ಸಂಬಂಧಿ ದ್ವೇಷ ಎನ್ನುವಂತೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದರು. ಅದರಂತೆ ಪೊಲೀಸರು ಕೂಡ ನಡೆದುಕೊಂಡರು. ಹಿಂದೆ ಕುಕ್ಕರ್ ಸ್ಪೋಟ ಆದಗಾಲೂ ಮಧ್ಯಪ್ರವೇಶ ಮಾಡಿದ ಡಿ.ಕೆ.ಶಿವಕುಮಾರ್, ನನ್ನ ಬ್ರದರ್ ಎಂದಿದ್ದರು. ರಾಜ್ಯ ಸರ್ಕಾರ ಈ ರೀತಿ ನಿರ್ದೇಶನ ನೀಡಿದ್ದರಿಂದ ಪೊಲೀಸರಿಗೆ ಯಾವುದೇ ಸುಳುಹು ಸಿಗಲಿಲ್ಲ. ಆದರೆ ಎನ್‌ಐಎ ಬಂದ ಬಳಿಕ ಭಯೋತ್ಪಾದಕ ಚಟುವಟಿಕೆ ಬಯಲಾಗಿದೆ ಎಂದು ಹೇಳಿದರು.
ಕಾಂಗ್ರೆಸ್‌ನ ಸಹೋದರಿ ಮಮತಾ ಬ್ಯಾನರ್ಜಿಯವರ ರಾಜ್ಯದಲ್ಲೇ ಭಯೋತ್ಪಾದಕರು ಸಿಕ್ಕಿದ್ದಾರೆ, ಇಲ್ಲಿ ಬ್ರದರ್‌ಗಳಿದ್ದರೆ, ಅಲ್ಲಿ ಸಿಸ್ಟರ್ ಬಳಿಯೇ ಉಗ್ರರು ಸಿಕ್ಕಿದ್ದಾರೆ ಎಂದು ಅಶೋಕ್ ವ್ಯಂಗ್ಯವಾಡಿದರು.
ಭಯೋತ್ಪಾದಕರಿಗೆ ಪಶ್ಚಿಮ ಬಂಗಾಳ ಸುರಕ್ಷಿತ ಸ್ಥಳವಾಗಿದೆ. ಎನ್‌ಐಎ ತಂಡ ಸಾಯಿ ಪ್ರಸಾದ್ ಎಂಬುವರನ್ನು ತನಿಖೆಗೆ ಕರೆದರೆ ಸಚಿವ ದಿನೇಶ್ ಗುಂಡೂರಾವ್ ಅದನ್ನೇ ಹಿಡಿದುಕೊಂಡು ದಿಕ್ಕು ತಪ್ಪಿಸುವ ಕೆಲಸ ಮಾಡಿದ್ದರು. ಸಾಯಿ ಪ್ರಸಾದ್ ಸಾಕ್ಷಿಯಾಗಿ ಹೋಗಿದ್ದು, ಅವರ ವಿವರವನ್ನು ಎಲ್ಲರ ಮುಂದೆ ಕಾಂಗ್ರೆಸ್‌ನವರು ಬಹಿರಂಗ ಮಾಡಿದ್ದಾರೆ ಎಂದು ಟೀಕಿಸಿದರು.