ಮೈಸೂರು,ಮಾ.5: ಪರಿಸರದ ಜತೆಗೆ ಪ್ರಾಣಿ, ಪಕ್ಷಿಗಳ ಸಂರಕ್ಷಣೆ ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ಉರಗ ತಜ್ಞ ಸ್ನೇಕ್ ಶಾಮ್ ಹೇಳಿದರು.
ನಗರದ ಸರಸ್ವತಿಪುರಂ ನಲ್ಲಿರುವ ಟಿ.ಟಿ.ಎಲ್ ಟ್ರಸ್ಟ್, ಟಿ.ಟಿ.ಎಲ್ ವಾಣಿಜ್ಯ ವ್ಯವಹಾರ ನಿರ್ವಹಣಾ ಕಾಲೇಜು, ಟಿ.ಟಿ.ಎಲ್ ಸ್ವತಂತ್ರ ಪದವಿ ಪೂರ್ವ ಕಾಲೇಜು,ಯುವ ರೆಡ್ ಕ್ರಾಸ್ ಘಟಕ ಹಾಗೂ ರಾಷ್ಟ್ರೀಯ ಸೇವಾ ಯೋಜನೆ ಘಟಕ ಮತ್ತು ಐಕ್ಯೂಎಸಿ ವತಿಯಿಂದ ಹಮ್ಮಿಕೊಂಡಿದ್ದ ಪ್ರಾಣಿ-ಪಕ್ಷಿಗಳಿಗೆ ನೀರು ಉಣಿಸುವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಅನಾದಿ ಕಾಲದಿಂದಲೂ ಮನುಷ್ಯನಿಗೆ ಪ್ರಕೃತಿಯೊಂದಿಗೆ ಅವಿನಾಭಾವ ಸಂಬಂಧವಿದೆ, ಪ್ರಕೃತಿಯ ಅಸಮತೋಲನ, ಮಾನವ ನಿರ್ಮಿತ ಕೆಲವು ತಪ್ಪುಗಳಿಂದ ಪಕ್ಷಿ ಸಂಕುಲ ನಾಶದ ಅಂಚಿನಲ್ಲಿದೆ. ಬೇಸಿಗೆಯ ತಾಪಮಾನದಲ್ಲಿ ಪ್ರಾಣಿ, ಪಕ್ಷಿಗಳು ನೀರಿಲ್ಲದೆ ಕಂಗೆಡುವ ಸ್ಥಿತಿ ಇದೆ ಅವುಗಳನ್ನು ಕಾಪಾಡಬೇಕು ಎಂದು ಕರೆ ನೀಡಿದರು.
ಭವಿಷ್ಯದ ರೂವಾರಿಗಳಾದ ವಿದ್ಯಾರ್ಥಿಗಳಲ್ಲಿ ಈ ಬಗ್ಗೆ ಅರಿವು ಮೂಡಿಸಿ ಪಕ್ಷಿಗಳಿಗೆ ನೀರುಣಿಸುವ ಕಾರ್ಯಕ್ಕೆ ಮುಂದಾಗಿರುವುದು ಮಾದರಿ ಸೇವೆಯಾಗಿದೆ
ವಿದ್ಯಾರ್ಥಿಗಳು ಹಾಗೂ ಯುವ ಸಂಘಟನೆಗಳು ಇದನ್ನು ಆಂದೋಲನದ ಮಾದರಿಯಲ್ಲಿ ಜಿಲ್ಲೆಯ ಎಲ್ಲೆಡೆ ಹಮ್ಮಿಕೊಳ್ಳಬೇಕು ಈ ಮೂಲಕ ಪ್ರಾಣಿ, ಪಕ್ಷಿಗಳನ್ನು ಪ್ರೀತಿಸುವ ವಾತಾವರಣ ನಿರ್ಮಾಣವಾಗಬೇಕು ಎಂದು ಸ್ನೇಕ್ ಶಾಮ್ ಸಲಹೆ ನೀಡಿದರು.
ಕೆಎಂಪಿಕೆ ಟ್ರಸ್ಟ್ ಅಧ್ಯಕ್ಷ ವಿಕ್ರಮ ಅಯ್ಯಂಗಾರ್ ಮಾತನಾಡಿ ನಾಗರೀಕರು ತಮ್ಮ ಮನೆಯ ಮುಂದೆ ತೊಟ್ಟಿಗಳನ್ನಿಟ್ಟು ನೀರು ಹಾಕಬೇಕು ಇದರಿಂದ ಪ್ರಾಣಿಗಳಿಗೆ ಬಿಸಿಲಿನ ತಾಪ ತಣಿಸಿಕೊಳ್ಳಲು ಸಹಾಯವಾಗುತ್ತದೆ,ಅದೇ ರೀತಿ ಗಿಡ,ಮರಗಳಿಗೆ ಅಳವಡಿಸಿರುವ ಬೌಲುಗಳಿಗೆ ಪ್ರುದಿನ ನೀರು ಹಾಕಿದರೆ ಪಕ್ಷಗಳಿಗೆ ಅನುಕೂಲವಾಗುತ್ತದೆ ಎಂದು ಮನವಿ ಮಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಟಿ.ಟಿ. ಎಲ್ ಕಾಲೇಜಿನ ಪ್ರಾಂಶುಪಾಲ ಡಾ.ಬಿ ವಿ ಪ್ರಶಾಂತ್, ಟಿ.ಟಿ. ಎಲ್ ಟ್ರಸ್ಟ್ ನ ಡಾ. ಗೀತಾ ರಾಮ್ ದಾಸ್, ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಬ್ರಮರಾಂಬ ಎಸ್, ಪದವಿ ಕಾಲೇಜಿನ ಹಿರಿಯ ವಾಣಿಜ್ಯ ಶಾಸ್ತ್ರ ಉಪನ್ಯಾಸಕ ಪ್ರೊ. ಎನ್.ಎಂ. ರಾಮಚಂದ್ರಯ್ಯ,ಯುವ ರೆಡ್ ಕ್ರಾಸ್ ಘಟಕದ ಸಂಚಾಲಕರಾದ ಎಚ್. ಆರ್ ಗಿರೀಶ್, ಪ್ರಜ್ಞಾವಂತ ನಾಗರಿಕ ವೇದಿಕೆ ಅಧ್ಯಕ್ಷ ಕಡಕೋಳ ಜಗದೀಶ್, ಸುಚಿಂದ್ರ, ಮಿರ್ಲೆ ಪನೀಶ್ ಮತ್ತಿತರರು ಹಾಜರಿದ್ದರು.