ಬೆಂಗಳೂರು, ಮಾ.11: ಅಪಾಯಕಾರಿ ಕಾಟನ್ ಕ್ಯಾಂಡಿ,ಗೋಬಿ ಮಂಚೂರಿಯನ್ನು ಮಾರಾಟ ಮಾಡುವಂತಿಲ್ಲ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
ವಿಧಾನಸೌಧ ದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಸಚಿವರು,ಗೋಬಿ ಮಂಚೂರಿ, ಕಾಟನ್ ಕ್ಯಾಂಡಿಯಲ್ಲಿ ಅಪಾಯಕಾರಿ ಕೃತಕ ಬಣ್ಣ ಬಳಕೆ ಹೆಚ್ಚಾಗಿರುವುದು ಆಹಾರ ತಪಾಸಣೆಯಲ್ಲಿ ಕಂಡು ಬಂದಿದೆ ಎಂದು ಹೇಳಿದರು.
ಒಂದು ವೇಳೆ ಯಾರಾದರೂ ಇವುಗಳನ್ನು ಮಾರಾಟ ಮಾಡಿದರೆ ಅಥವಾ ಅಪಾಯಕಾರಿ ಕೃತಕ ಬಣ್ಣ ಬಳಕೆ ಮಾಡಿದರೆ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಸಿದರು.
ಸರ್ವೆಯಲ್ಲಿ ಸ್ಯಾಂಪಲ್ ಪರೀಕ್ಷೆ ಮಾಡಲಾಗಿತ್ತು. ಈ ಸರ್ವೆಯಲ್ಲಿ ಹತ್ತಾರು ಮಾದರಿ ಕಾಟನ್ ಕ್ಯಾಂಡಿ ಅಸುರಕ್ಷಿತವಾಗಿರುವುದು ಕಂಡು ಬಂದಿದೆ. ನೂರಕ್ಕೂ ಹೆಚ್ಚು ಮಾದರಿಯ ಗೋಬಿ ಹಾನಿಕಾರಕವಾಗಿದೆ. ಇದನ್ನು ಬಳಕೆ ಮಾಡುವಂತಿಲ್ಲ,ಇದಕ್ಕೆ ಅನುಮತಿಯೂ ಇಲ್ಲ ಎಂದು ಸ್ಪಷ್ಟಪಡಿಸಿದರು.
ಇದರಲ್ಲಿ ಕೆಲಮಿಕಲ್ ಇರುವುದು ಪತ್ತೆಯಾಗಿದೆ. ರೋಡೋ ಮೈನ್ ಬಿಯನ್ ಎಂಬ ಕೆಮಿಕಲ್ ಇರುತ್ತದೆ. ಇದು ದೇಹಕ್ಕೆ ಹಾನಿಕರ, ಹೀಗಾಗಿ ಮಕ್ಕಳು ಇದನ್ನು ತಿನ್ನಬಾರದು. ಇದು ನಾನಾ ಕಾಯಿಲೆಗಳನ್ನು ಹುಟ್ಟುಹಾಕುತ್ತದೆ ಎಂದು ದಿನೇಶ್ ಗುಂಡೂರಾವ್ ಎಚ್ಚರಿಕೆ ನೀಡಿದರು
ಕೃತಕ ಬಣ್ಣ ಹಾಕಿ ಮಾರಾಟ ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ. ಜೊತೆಗೆ ಅಂಥಹ ಮಾರಾಟ ಮಳಿಗೆಯ ಪರವಾನಿಗೆಯನ್ನು ರದ್ದು ಪಡಿಸಲಾಗುತ್ತದೆ ಎಂದು ದಿನೇಶ್ ಗುಂಡೂರಾವ್ ಹೇಳಿದರು.