Fri. Mar 6th, 2026

ಬೆಂಗಳೂರಿನಲ್ಲಿ ದೇಶದ ಅತಿದೊಡ್ಡ ‘ಮೆಗಾ ರೈಲ್ವೆ ಕೋಚಿಂಗ್ ಟರ್ಮಿನಲ್’ ಸ್ಥಾಪನೆ: ಕೇಂದ್ರ ಸಚಿವ ವಿ. ಸೋಮಣ್ಣ ಘೋಷಣೆ

Share this with Friends

ಬೆಂಗಳೂರು:ಬೆಂಗಳೂರು ನಗರದ ರೈಲ್ವೆ ಮೂಲಸೌಕರ್ಯದಲ್ಲಿ ಕ್ರಾಂತಿಕಾರಿ ಬದಲಾವಣೆ ತರುವ ನಿಟ್ಟಿನಲ್ಲಿ, ದೇವನಹಳ್ಳಿ ಸಮೀಪ ದೇಶದ ಅತ್ಯಂತ ದೊಡ್ಡದಾದ ‘ಮೆಗಾ ಕೋಚಿಂಗ್ ಟರ್ಮಿನಲ್’ ಅನ್ನು ಕೇಂದ್ರ ರೈಲ್ವೆ ಇಲಾಖೆಯ ವತಿಯಿಂದ ನಿರ್ಮಿಸಲಾಗುವುದು ಎಂದು ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ರಾಜ್ಯ ಖಾತೆ ಸಚಿವ ವಿ. ಸೋಮಣ್ಣ ಅವರು ತಿಳಿಸಿದ್ದಾರೆ.

ನಾಯಂಡಹಳ್ಳಿ ರೈಲ್ವೆ ಮೇಲ್ಸೇತುವೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು,ನಗರದ ರೈಲ್ವೆ ನಿಲ್ದಾಣಗಳಲ್ಲಿ ಹೆಚ್ಚುತ್ತಿರುವ ದಟ್ಟಣೆಯನ್ನು ನಿಯಂತ್ರಿಸಲು ಮತ್ತು ಭವಿಷ್ಯದ ಅಗತ್ಯತೆಗಳನ್ನು ಪೂರೈಸಲು ಈ ಬೃಹತ್ ಯೋಜನೆಯನ್ನು ರೂಪಿಸಲಾಗಿದೆ. ಈ ಮೆಗಾ ಟರ್ಮಿನಲ್ ಅನ್ನು ದೇವನಹಳ್ಳಿ ಭಾಗದಲ್ಲಿ ಅಂದಾಜು 400 ಎಕರೆ ವಿಸ್ತೀರ್ಣದಲ್ಲಿ ನಿರ್ಮಿಸಲು ಉದ್ದೇಶಿಸಲಾಗಿದೆ. ಇದಕ್ಕೆ ಪೂರಕವಾಗಿ ಯಲಹಂಕ-ದೇವನಹಳ್ಳಿ-ಚಿಕ್ಕಬಳ್ಳಾಪುರ ಮಾರ್ಗವನ್ನು ಅಭಿವೃದ್ಧಿಪಡಿಸಲಾಗುವುದು ಎಂದರು.

ಅತಿದೊಡ್ಡ ಮೂಲಸೌಕರ್ಯ: ಈ ಟರ್ಮಿನಲ್ ಭಾರತೀಯ ರೈಲ್ವೆಯಲ್ಲೇ ಅತಿದೊಡ್ಡ ಕೋಚಿಂಗ್ ಸೆಂಟರ್ ಆಗಲಿದ್ದು, ಇಲ್ಲಿ 10ಕ್ಕೂ ಹೆಚ್ಚು ಪ್ಲಾಟ್‌ಫಾರ್ಮ್‌ಗಳು ಹಾಗೂ ರೈಲುಗಳ ತಾಂತ್ರಿಕ ನಿರ್ವಹಣೆಗಾಗಿ (Maintenance) ಹೆಚ್ಚಿನ ಸಂಖ್ಯೆಯ ಪಿಟ್ ಲೈನ್‌ಗಳು ಮತ್ತು ಸ್ಟೇಬಲಿಂಗ್ ಲೈನ್‌ಗಳನ್ನು ಅಳವಡಿಸಲಾಗುವುದು.ಈ ಯೋಜನೆಯ ಅಂತಿಮ ಸ್ಥಳ ಸಮೀಕ್ಷೆ (Final Location Survey) ನಡೆಸಲು ರೈಲ್ವೆ ಮಂಡಳಿಯು ಈಗಾಗಲೇ ₹1.35 ಕೋಟಿಗಳನ್ನು ಬಿಡುಗಡೆ ಮಾಡಿದೆ. ಸಮೀಕ್ಷೆಯ ವರದಿ ಬಂದ ತಕ್ಷಣ ಸಮಗ್ರ ಯೋಜನಾ ವರದಿ (DPR) ಸಿದ್ಧಪಡಿಸಿ ಕಾಮಗಾರಿ ಆರಂಭಿಸಲಾಗುವುದು ಎಂದರು.

ದಟ್ಟಣೆ ನಿವಾರಣೆ: ಪ್ರಸ್ತುತ ಕೆ.ಎಸ್.ಆರ್ ಬೆಂಗಳೂರು, ಯಶವಂತಪುರ ಹಾಗೂ ಎಂ. ವಿಶ್ವೇಶ್ವರಯ್ಯ ಟರ್ಮಿನಲ್‌ಗಳ ಮೇಲಿರುವ ಭಾರೀ ಒತ್ತಡವನ್ನು ಈ ಹೊಸ ಟರ್ಮಿನಲ್ ಕಡಿಮೆ ಮಾಡಲಿದೆ. ಇದು ದೂರದೂರುಗಳಿಗೆ ಸಂಚರಿಸುವ ರೈಲುಗಳಿಗೆ ಪ್ರಮುಖ ಹಬ್ ಆಗಿ ಕಾರ್ಯನಿರ್ವಹಿಸಲಿದೆ ಎಂದರು.

ನೆಲಮಂಗಲ ಟರ್ಮಿನಲ್: ಇದರೊಂದಿಗೆ ನಗರದ ಪಶ್ಚಿಮ ಭಾಗದ ಜನರ ಅನುಕೂಲಕ್ಕಾಗಿ ನೆಲಮಂಗಲದಲ್ಲೂ ಒಂದು ರೈಲ್ವೆ ಟರ್ಮಿನಲ್ ನಿರ್ಮಿಸುವ ಬಗ್ಗೆ ತಾಂತ್ರಿಕ ಸಾಧಕ-ಬಾಧಕಗಳ ಪರಿಶೀಲನೆ ನಡೆಯುತ್ತಿದೆ ಎಂದರು.

ಬೆಂಗಳೂರು ನಗರವನ್ನು ರೈಲ್ವೆ ಸಂಪರ್ಕದ ಜಾಗತಿಕ ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಈ ಮೆಗಾ ಟರ್ಮಿನಲ್ ಮತ್ತು ಪ್ರಸ್ತಾವಿತ 287 ಕಿ.ಮೀ ಉದ್ದದ ಸುತ್ತೋಲೆ ರೈಲ್ವೆ (Circular Railway) ಯೋಜನೆಗಳು ನಿರ್ಣಾಯಕ ಪಾತ್ರ ವಹಿಸಲಿವೆ ಎಂದು ಸಚಿವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.


Share this with Friends

Related Post