ಬೆಂಗಳೂರು: ಪ್ರತೀ ಬಾರಿ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಪಟಾಕಿ ಹೊಡೆಯುವಾಗ ಅತಿ ಎಚ್ಚರ ವಹಿಸುವಂತೆ ತಿಳುವಳಿಕೆ ಮೂಡಿಸಿದರೂ ಅವಘಡಗಳು ಹೆಚ್ಚುತ್ತಲೆ ಇರುವುದು ನಿಜಕ್ಕೂ ದುರಂತವೆ ಆಗಿದೆ.
ಪಟಾಕಿ ಅವಘಡಗಳಿಂದ ಕಣ್ಣಿಗೆ ಹಾನಿಯಾಗುತ್ತಿರುವ ಪ್ರಕರಣಗಳು ಎಲ್ಲಾ ನಗರಗಳಲ್ಲಿ ಹೆಚ್ಚಾಗುತ್ತಲೆ ಇದೆ. ಶುಕ್ರವಾರ ಒಂದೇ ದಿನ ಕಣ್ಣಿನ ತೊಂದರೆಗೆ ಒಳಗಾದ ಪ್ರಕರಣ ಸಂಖ್ಯೆ 54ಕ್ಕೆ ಏರಿಕೆಯಾಗಿದೆ.
ಬೇರೆಯವರು ಸಿಡಿಸಿದ ಪಟಾಕಿಯಿಂದ ಕಣ್ಣಿನ ಗಾಯಕ್ಕೊಳಗಾದವರೆ ಹೆಚ್ಚು ಎಂಬುದು ಆಘಾತಕಾರಿ ವಿಷಯ.
ರಾಜ್ಯ ಪೊಲೀಸ್ ಇಲಾಖೆ ಹಾಗೂ ಬಿಬಿಎಂಪಿ ಅಧಿಕಾರಿಗಳು ಸೇರಿದಂತೆ ಹಲವು ಇಲಾಖೆಗಳು, ಸಂಘ ಸಂಸ್ಥೆಗಳು ಪಟಾಕಿ ಹಚ್ಚುವ ವೇಳೆ ಮುಂಜಾಗೃತಾ ಕ್ರಮ ವಹಿಸುವಂತೆ ಜಾಗೃತಿ ಮೂಡಿಸಿದ್ದರೂ ಪಟಾಕಿ ದುರಂತಗಳು ಸಂಭವಿಸುತ್ತಲೇ ಇವೆ.
ಒಬ್ಬ ವಯಸ್ಕರು ಸೇರಿದಂತೆ 10 ಮಕ್ಕಳು ಮಿಂಟೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ. 6 ಮಂದಿ ಒಪಿಡಿ ಹಾಗೂ 4 ಮಂದಿ ನಾನ್ ಒಪಿಡಿಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದರಲ್ಲಿ ಒಂದು ಮಗುವಿಗೆ ಶಸ್ತ್ರಚಿಕಿತ್ಸೆ ಮಾಡಲಾಗಿದೆ.
ಶಂಕರ ಕಣ್ಣಿನ ಆಸ್ಪತ್ರೆಯಲ್ಲಿ 12 ಮಂದಿ ದಾಖಲಾಗಿದ್ದು ಅದರಲ್ಲಿ 8 ಮಕ್ಕಳು ಹಾಗೂ 4 ವಯಸ್ಕರು ಇದ್ದಾರೆ. ಕಾರ್ನಿಯಾ ಗಾಯ ಸೇರಿದಂತೆ ಇತರ ಗಂಭೀರ ಗಾಯಗಳಾಗಿದೆ.
ಅಗರ್ವಾಲ್ ಕಣ್ಣಿನ ಆಸ್ಪತ್ರೆಯಲ್ಲಿ 9 ಹಾಗೂ ನಾರಾಯಣ ನೇತ್ರಾಲಯದ ರಾಜಾಜಿನಗರ ಶಾಖೆಯಲ್ಲಿ 11, ಬೊಮ್ಮಸಂದ್ರ ಶಾಖೆಯಲ್ಲಿ 4, ಇಂದಿರಾನಗರದಲ್ಲಿ 5 ಮತ್ತು ಬನ್ನೇರುಗಟ್ಟ ಶಾಖೆಯಲ್ಲಿ 3 ಒಟ್ಟು 23 ಪ್ರಕರಣಗಳು ದಾಖಲಾಗಿವೆ.