ಬೆಂಗಳೂರು, ಏ.8: ನಾಳೆ ವರ್ಷದ ಮೊದಲ ಹಬ್ಬ ಯುಗಾದಿ. ಹಿಂದೂಗಳಿಗೆ ನಾಳೆಯಿಂದಲೇ ಹೊಸ ವರ್ಷ ಪ್ರಾರಂಭ. ಹಾಗಾಗಿ ಮಾರುಕಟ್ಟೆಗಳಲ್ಲಿ ಸಾಮಾನು ಕೊಳ್ಳಲು ಜನ ಮುಗಿಬಿದ್ದಿದ್ದಾರೆ.
ಅದರಲ್ಲೂ ಬೆಂಗಳೂರಿನ ಪ್ರಸಿದ್ಧ ಕೆಆರ್ ಮಾರುಕಟ್ಟೆಯಲ್ಲಿ ಕಾಲಿಡಲಾಗದಷ್ಟು ಜನ ಜಂಗುಳಿ ತುಂಬಿತ್ತು.
ಬರಗಾಲದ ನಡುವೆಯೂ ಹೊಸ ವರ್ಷವನ್ನು ಬರಮಾಡಿಕೊಳ್ಳಲು ಜನರು ಕಾತರದಿಂದ ಕಾಯುತ್ತಿದ್ದಾರೆ, ಮಾವಿನ ಸೊಪ್ಪು ಬೇವಿನ ಸೊಪ್ಪುಹೂ, ಹಣ್ಣು, ತರಕಾರಿ ಕೊಳ್ಳಲು ಜನ ಮುಗಿಬಿದ್ದರು.
ಹಬ್ಬಕ್ಕೆ ಹಣ್ಣು ತರಕಾರಿ ಹೂವಿನ ಬೆಲೆ ಕೂಡ ಏರಿಬಿಟ್ಟಿದೆ ಆದರೆ ಕೆಲವೊಂದು ಸ್ವಲ್ಪ ಕಡಿಮೆ ಬೆಲೆಯಲ್ಲಿ ಸಿಗುವುದರಿಂದ ಬೆಂಗಳೂರಿನ ಬಹಳಷ್ಟು ಜನ ಇಲ್ಲಿಗೆ ಆಗಮಿಸಿ ಸಾಮಾನು ಕೊಳ್ಳುತ್ತಾರೆ.
ಇಂದು ಕೂಡ ಹಬ್ಬಕ್ಕೆ ಒಬ್ಬಟು ಮತ್ತಿತರ ಸಿಹಿ ಮಾಡಲು ಸಾಮಾನುಗಳನ್ನು ಕೊಳ್ಳಲು, ಬಾಳೆ ಎಲೆ, ಬಾಳೆ ಕಂದು, ಮನೆಗಳಿಗೆ ತಳಿರು ತೋರಣ ಕಟ್ಟಲು ಮಾವಿನ ಸೊಪ್ಪು ಕೊಳ್ಳಲು ಹೆಚ್ಚು ಜನ ಆಗಮಿಸಿದ್ದರಿಂದ ಎಲ್ಲಿ ನೋಡಿದರಲ್ಲಿ ಜನ ತುಂಬಿದ್ದರು.
ಜತೆಗೆ ಸಾಕಷ್ಟು ವಾಹನಗಳು ಸಾಲುಗಟ್ಟಿ ನಿಂತಿದ್ದರಿಂದ ಮೂರ್ನಾಲ್ಕು ಗಂಟೆ ಕಾಲ ಟ್ರಾಫಿಕ್ ಜಾಮ್ ಕೂಡ ಆಗಿತ್ತು.