Mon. Mar 9th, 2026

ಸಿಲಿಂಡರ್ ಬೆಲೆ ಏರಿಕೆ ಸಾಮಾನ್ಯ ಜನರಿಗೆ ಹೊರೆ: ಕೇಂದ್ರದ ವಿರುದ್ಧ ಸಿಎಂ ಸಿದ್ದರಾಮಯ್ಯ ಅಸಮಾಧಾನ

Share this with Friends

ಬೆಂಗಳೂರು: ಕೇಂದ್ರ ಸರ್ಕಾರವು ವಾಣಿಜ್ಯ ಮತ್ತು ಗೃಹ ಬಳಕೆಯ ಎಲ್‌ಪಿಜಿ ಸಿಲಿಂಡರ್ ದರವನ್ನು ಏರಿಕೆ ಮಾಡಿರುವುದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆಯನ್ನು 115 ರೂ. ಹಾಗೂ ಗೃಹ ಬಳಕೆಯ ಸಿಲಿಂಡರ್ ಬೆಲೆಯನ್ನು 60 ರೂ. ಹೆಚ್ಚಿಸಿರುವುದು ಸರಿಯಲ್ಲ. ಈ ಬೆಲೆ ಏರಿಕೆ ಜನಸಾಮಾನ್ಯರಿಗೆ ದೊಡ್ಡ ಹೊರೆಯಾಗಲಿದೆ,” ಎಂದು ಆತಂಕ ವ್ಯಕ್ತಪಡಿಸಿದರು. ಸಿಲಿಂಡರ್ ಪೂರೈಕೆಯ ವಿಚಾರ ಏನೇ ಇದ್ದರೂ, ದರ ಏರಿಕೆ ಮಾಡಿರುವ ಕ್ರಮ ಸಮರ್ಥನೀಯವಲ್ಲ ಎಂದು ಅವರು ತಿಳಿಸಿದರು.

ಬಜೆಟ್ ಅರಿವಿನಿಂದ ಸದನದಲ್ಲಿ ಅರ್ಥಪೂರ್ಣ ಚರ್ಚೆ ಸಾಧ್ಯ: ಶಾಸಕರು ಆಯವ್ಯಯದ ಸೂಕ್ಷ್ಮತೆಗಳನ್ನು ಅರಿತುಕೊಂಡಾಗ ಮಾತ್ರ ಸದನದಲ್ಲಿ ಸಕ್ರಿಯವಾಗಿ ಮತ್ತು ಪರಿಣಾಮಕಾರಿಯಾಗಿ ಪಾಲ್ಗೊಳ್ಳಲು ಸಾಧ್ಯ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.

ನಗರದಲ್ಲಿ ಇಂದು ಆಯೋಜಿಸಲಾಗಿದ್ದ ‘ಆಯವ್ಯಯ ರಾಜಸ್ವಗಳ ಸಂಗ್ರಹಣೆ, ಅನುದಾನ ಹಂಚಿಕೆ ಮತ್ತು ನಿರ್ವಹಣೆ’ ಕುರಿತ ಶಾಸಕರ ತರಬೇತಿ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯದ ಆರ್ಥಿಕ ಸ್ಥಿತಿಗತಿ, ತೆರಿಗೆ ಸಂಗ್ರಹದ ಮೂಲಗಳು ಹಾಗೂ ಅನುದಾನದ ಸಮರ್ಪಕ ಹಂಚಿಕೆಯ ಬಗ್ಗೆ ಪ್ರತಿಯೊಬ್ಬ ಜನಪ್ರತಿನಿಧಿಗೂ ಸ್ಪಷ್ಟ ಅರಿವಿರಬೇಕು. ಆಗ ಮಾತ್ರ ಅಭಿವೃದ್ಧಿ ಕೆಲಸಗಳಿಗೆ ವೇಗ ನೀಡಲು ಸಾಧ್ಯ ಎಂದರು.

ಬಜೆಟ್ ಕೇವಲ ಅಂಕಿ-ಅಂಶಗಳ ಆಟವಲ್ಲ. ಅದರ ಹಿಂದಿನ ಉದ್ದೇಶಗಳನ್ನು ತಿಳಿದು ಶಾಸಕರು ಸದನದಲ್ಲಿ ಚರ್ಚಿಸಿದರೆ, ಅದು ಪ್ರಜಾಪ್ರಭುತ್ವದ ಆಶಯವನ್ನು ಎತ್ತಿ ಹಿಡಿಯುತ್ತದೆ. ಮಂಜೂರಾದ ಅನುದಾನವನ್ನು ಕಾಲಮಿತಿಯಲ್ಲಿ ಹೇಗೆ ಬಳಸಬೇಕು ಮತ್ತು ಅದರ ನಿರ್ವಹಣೆ ಹೇಗೆ ಮಾಡಬೇಕೆಂಬ ಬಗ್ಗೆ ಈ ಶಿಬಿರವು ಶಾಸಕರಿಗೆ ದಿಕ್ಸೂಚಿಯಾಗಲಿದೆ ಎಂದು ಅವರು ಆಶಯ ವ್ಯಕ್ತಪಡಿಸಿದರು

 


Share this with Friends

Related Post