ಬೆಂಗಳೂರು: ದೇಶದಲ್ಲಿ ಅನಿಲ ಸಿಲಿಂಡರ್ ಪೂರೈಕೆಯಲ್ಲಿ ಉಂಟಾಗಿರುವ ವ್ಯತ್ಯಯ ಹಾಗೂ ಬೆಲೆ ಏರಿಕೆ ವಿಚಾರವಾಗಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಮಂಗಳವಾರ ವಿಧಾನಸೌಧದ ಬಳಿ ಮಾಧ್ಯಮಗಳೊಂದಿಗೆ ಮಾತನಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್, “ಸಿಲಿಂಡರ್ ಕೊರತೆಯಿಂದ ಹೋಟೆಲ್ ಉದ್ಯಮ ಮುಚ್ಚುವ ಹಂತಕ್ಕೆ ಬಂದಿದ್ದರೂ ಕೇಂದ್ರ ಸರ್ಕಾರ ಬಾಯಿ ಬಿಡುತ್ತಿಲ್ಲ. ದೇಶದ ವಿದೇಶಾಂಗ ನೀತಿ ಹಳ್ಳ ಹಿಡಿದಿದ್ದು, ಕಳೆದ 15 ದಿನಗಳಿಂದ ಸಮಸ್ಯೆ ಇದ್ದರೂ ಪರ್ಯಾಯ ವ್ಯವಸ್ಥೆ ಮಾಡಿಲ್ಲ,” ಎಂದು ಕಿಡಿ ಕಾರಿದರು.
ಇದೇ ವಿಚಾರವಾಗಿ ಕೇಂದ್ರದ ಮಾಜಿ ಸಚಿವೆ ಸ್ಮೃತಿ ಇರಾನಿ ವಿರುದ್ಧ ವ್ಯಂಗ್ಯವಾಡಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್, “ಹಿಂದೆ ಗ್ಯಾಸ್ ಬೆಲೆ 10-20 ರೂಪಾಯಿ ಏರಿಕೆಯಾದರೂ ರಸ್ತೆಗಿಳಿದು ಪ್ರತಿಭಟಿಸುತ್ತಿದ್ದ ಸ್ಮೃತಿ ಇರಾನಿ ಅವರು ಈಗ ಎಲ್ಲಿ ಕಾಣೆಯಾಗಿದ್ದಾರೆ? ಬೆಲೆ ಏರಿಕೆ ಮೂಲಕ ಮಹಿಳೆಯರಿಗೆ ಕೇಂದ್ರ ಸರ್ಕಾರ ‘ಉಡುಗೊರೆ’ ನೀಡಿದೆ,” ಎಂದು ಟೀಕಿಸಿದರು. ಯುದ್ಧದ ಸನ್ನಿವೇಶದಿಂದ ಮುಂದಿನ ದಿನಗಳಲ್ಲಿ ಸಾಮಾನ್ಯ ಜನರಿಗೆ ಮತ್ತಷ್ಟು ಸಂಕಷ್ಟ ಎದುರಾಗಲಿದ್ದು, ಕೇಂದ್ರ ತಕ್ಷಣ ಎಚ್ಚೆತ್ತುಕೊಳ್ಳಬೇಕು ಎಂದು ಅವರು ಆಗ್ರಹಿಸಿದರು.
ಕೆಪಿಸಿಸಿ ಸಾರಥ್ಯಕ್ಕೆ 6 ವರ್ಷ:
ಇದೇ ಸಂದರ್ಭದಲ್ಲಿ ಡಿ.ಕೆ. ಶಿವಕುಮಾರ್ ಅವರು ಕೆಪಿಸಿಸಿ ಅಧ್ಯಕ್ಷರಾಗಿ 6 ವರ್ಷ ಪೂರೈಸಿರುವುದಕ್ಕೆ ಲಕ್ಷ್ಮೀ ಹೆಬ್ಬಾಳಕರ್ ಅಭಿನಂದನೆ ಸಲ್ಲಿಸಿದರು. “ಡಿಕೆಶಿ ಅತ್ಯಂತ ಯಶಸ್ವಿ ಅಧ್ಯಕ್ಷರಾಗಿದ್ದು, ಅವರ ಸಂಘಟನಾ ಶಕ್ತಿಯಿಂದ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ,” ಎಂದು ಶ್ಲಾಘಿಸಿದರು. ಕೆಪಿಸಿಸಿ ಅಧ್ಯಕ್ಷರಾಗಿ 6 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಇಂದು ಸಂಜೆ ಎಲ್ಲಾ ಶಾಸಕರಿಗೆ ಡಿಕೆಶಿ ಔತಣಕೂಟ ಏರ್ಪಡಿಸಿದ್ದಾರೆ.

