Mon. Dec 23rd, 2024

ಶ್ರೇಷ್ಠ ಶಿಕ್ಷಕರಿಗೆ “ದಿ ಎಜುಕೇಟರ್ಸ್ ಗಿಲ್ಡ್ ಅವಾರ್ಡ್ಸ್” ನೀಡಿ ಗೌರವಿಸಿದ ಡಿ4ಎ ಶಿಕ್ಷಣ ಪ್ರತಿಷ್ಠಾನ

Share this with Friends

ಬೆಂಗಳೂರು : ಶಿಕ್ಷಣ ಕ್ಷೇತ್ರದಲ್ಲಿ ಮಹತ್ತರ ಸಾಧನೆ ಮಾಡಿದ ಹಾಗೂ ವಿದ್ಯಾರ್ಥಿಗಳ ಬದುಕು ಮತ್ತು ಭವಿಷ್ಯದ ಮೇಲೆ ಗಾಢವಾಗಿ ಪರಿಣಾಮ ಬೀರಿದ ಬೆಂಗಳೂರಿನ ಶ್ರೇಷ್ಠ ಶಿಕ್ಷಕರಿಗೆ ಡಿ4ಎ ಶಿಕ್ಷಣ ಪ್ರತಿಷ್ಠಾನವು “ದಿ ಎಜುಕೇಟರ್ಸ್ ಗಿಲ್ಡ್ ಅವಾರ್ಡ್ಸ್” (ಟಿಇಜಿಎ) ನೀಡಿ ಗೌರವಿಸಿದೆ.

ಸಮಾರಂಭದಲ್ಲಿ ಶಿಕ್ಷಾ ರತ್ನ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಇನ್ ಸೈಟ್ ಆಕಾಡೆಮಿಯ ಸಂಸ್ಥಾಪಕಿ ಮೇ ರೂತ್ ಡಿಸೋಜಾ ಅವರು ಶಿಕ್ಷಣ ಕ್ಷೇತ್ರದಲ್ಲಿ ನಾನು 35 ವರ್ಷಗಳ ಅನುಭವ ಹೊಂದಿದ್ದು ನನ್ನ ಜೀವಮಾನದಲ್ಲಿ ಅಸಂಖ್ಯಾತ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುವ ಸೌಭಾಗ್ಯ ಸಿಕ್ಕಿದೆ. ನನ್ನ ಕೆಲಸಕ್ಕೆ ಸಿಕ್ಕಿರುವ ಈ ಪ್ರಶಸ್ತಿಯನ್ನು ಅತ್ಯಂತ ಸಂತೋಷದಿಂದ ಸ್ವೀಕರಿಸಿದ್ದೇನೆ ಎಂದರು.

ಎಜುಕೇಟರ್ಸ್ ಗಿಲ್ಡ್ ಪ್ರಶಸ್ತಿ ಕುರಿತು ಮಾತನಾಡಿದ ಡಿ4ಎ ಎಜುಕೇಷನ್ ಫೌಂಡೇಶನ್ ನ ಟ್ರಸ್ಟಿ ಶ್ರೀ ಎ. ನಾರಾಯಣನ್ ಅವರು, “ಈ ಪ್ರಶಸ್ತಿ ಪ್ರದಾನ ಕಾರ್ಯಕ್ರಮವು ಬೆಂಗಳೂರಿನ ಶ್ರೇಷ್ಠ ಶಿಕ್ಷಕ ಸಮುದಾಯದ ಅತ್ಯದ್ಭುತ ಪ್ರತಿಭೆಯನ್ನು ತೋರಿಸಿಕೊಟ್ಟಿದೆ. ಯುವಜನರ ಮೇಲೆ ಪ್ರಭಾವ ಬೀರುವ ಶಿಕ್ಷಕರ ಮಹತ್ವವನ್ನು ಟಿಇಜಿಎ ಪ್ರಶಸ್ತಿಯು ಸಾರುತ್ತದೆ” ಎಂದು ಹೇಳಿದರು.

ಪ್ರಶಸ್ತಿ ಕುರಿತು ಮಾತನಾಡಿರುವ ದೀಕ್ಷಾ ವೇದಾಂತು ಸಂಸ್ಥೆಯ ಸ್ಥಾಪಕ ಡಾ.ಜಿ. ಶ್ರೀಧರ್ ಅವರು, “ದೇಶ ಕಟ್ಟುವ ವಿಚಾರದಲ್ಲಿ ಮಹತ್ವದ ಪಾತ್ರ ವಹಿಸುವ ಶಿಕ್ಷಕರಿಗೆ ಟಿಎಜಿಎ ಪ್ರಶಸ್ತಿ ನೀಡಿ ಗೌರವಿಸುವ ಪರಿಕಲ್ಪನೆಯನ್ನು ಡಿ4ಎ ಎಜುಕೇಶನ್ ಫೌಂಡೇಶನ್ ಪ್ರಸ್ತುತ ಪಡೆಸಿದಾಗ ನಮಗೆ ನಿಜಕ್ಕೂ ಆನಂದವಾಯಿತು. ಅವರ ಜೊತೆ ನಾವು ಸಂತೋಷದಿಂದ ಕೈ ಜೋಡಿಸಿದ್ದೇವೆ. ಮುಂಬರುವ ದಿನಗಳಲ್ಲಿ ಸರ್ಕಾರಿ ಶಾಲಾ ಶಿಕ್ಷಕರಿಗೆ ಈ ಪ್ರಶಸ್ತಿ ನೀಡುವ ಆಲೋಚನೆ ಹೊಂದಿದ್ದೇವೆ” ಎಂದು ಹೇಳಿದರು.

ಪ್ರಶಸ್ತಿ ವಿಭಾಗಗಳು:
ಶಿಕ್ಷಾ ರತ್ನ: ಇದು ಜೀವಮಾನ ಸಾಧನೆ ಪ್ರಶಸ್ತಿ ಆಗಿದ್ದು, ತಮ್ಮ ಶಾಲೆಗಳ ಜೊತೆಗೆ ಸಮುದಾಯದಲ್ಲಿಯೂ ಗಾಢ ಪ್ರಭಾವ ಬೀರಿದ ಶಿಕ್ಷಕರಿಗೆ ಸಲ್ಲುವ ಪುರಸ್ಕಾರ.

ಶಿಕ್ಷಾ ವಿಭೂಷಣ: ವಿದ್ಯಾರ್ಥಿಗಳನ್ನು ಗಾಢವಾಗಿ ಪ್ರಭಾವಿಸಿದ ಮತ್ತು ಸ್ಫೂರ್ತಿ ನೀಡಿದ ಶಿಕ್ಷಕರನ್ನು ಗೌರವಿಸುವ ಪ್ರಶಸ್ತಿ.

ಶಿಕ್ಷಾ ಭೂಷಣ: ಅದ್ಭುತ ವಿಷಯ ಪರಿಣತಿ ಮತ್ತು ಶ್ರೇಷ್ಠ ಬೋಧನಾ ಕೌಶಲ್ಯ ಹೊಂದಿರುವ ಶಿಕ್ಷಕರಿಗೆ ಸಲ್ಲುವ ಪ್ರಶಸ್ತಿ.

ಶಿಕ್ಷಾ ಶ್ರೀ: ಮಾರ್ಗದರ್ಶನ ನೀಡುವ ವಿಚಾರದಲ್ಲಿ ಮತ್ತು ಶ್ರೇಷ್ಠ ಶಿಕ್ಷಣ ಒದಗಿಸುವ ವಿಚಾರದಲ್ಲಿ ಅತ್ಯುತ್ತಮ ಸಾಧನೆ ತೋರಿದ ಯುವ ಶಿಕ್ಷಕರನ್ನು ಗೌರವಿಸುವ ಪ್ರಶಸ್ತಿ.

ಯಶಸ್ವಿಯಾಗಿ ನಡೆದ ಕಾರ್ಯಕ್ರಮದಲ್ಲಿ ವಿವಿಧ ಶಿಕ್ಷಣತಜ್ಞರು, ವಿದ್ಯಾರ್ಥಿಗಳು, ಪೋಷಕರು ಮತ್ತು ಸಾರ್ವಜನಿಕರು ಭಾಗವಹಿಸಿದ್ದರು.


Share this with Friends

Related Post