ಜೈಪುರ್,ಏ.1: ನಮಗೆ ಸ್ವಾತಂತ್ರ್ಯ ಬಂದು ಎಷ್ಟು ದಶಕಗಳು ಕಳೆದರೂ ಗಾಂಧೀಜಿಯವರ ಕನಸು ನನಸಾಗೇ ಇಲ್ಲ.ಇನ್ನೂ ಅಸ್ಪೃಶ್ಯತೆ ಜೀವಂತವಾಗಿದೆ
ಅಸ್ಪೃಶ್ಯತೆ ದೇಶದಲ್ಲಿ ಇನ್ನೂ ತಾಂಡವವಾಡುತ್ತಲೇ ಇದೆ.ಇದಕ್ಕೆ
ರಾಜಸ್ಥಾನದ ಅಲ್ವಾರ್ ಎಂಬಲ್ಲಿ ನಡೆದ ಘಟನೆ ಸಾಕ್ಷಿಯಾಗಿದೆ.
ಅಲ್ವಾರ್ ನಲ್ಲಿ ಹ್ಯಾಂಡ್ ಪಂಪ್ ನಿಂದ ನೀರು ತುಂಬಿಸುವಾಗ ಮೇಲ್ಜಾತಿಯ ವ್ಯಕ್ತಿಗೆ ಸೇರಿದ ಬಕೆಟ್ ಮುಟ್ಟಿದನೆಂಬ ಕಾರಣಕ್ಕೆ ಎಂಟು ವರ್ಷದ ದಲಿತ ಬಾಲಕನ ಮೇಲೆ ದೈಹಿಕ ಹಲ್ಲೆ ನಡೆಸಲಾಗಿದೆ.
ಅಲ್ವಾರ್ ನ ಮಂಗಳೇಶ್ಪುರ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ನಾಲ್ಕನೇ ತರಗತಿ ವಿದ್ಯಾರ್ಥಿ ಚಿರಾಗ್ ಶಾಲೆಯಲ್ಲಿ ಆಳವಡಿಸಲಾದ ಹ್ಯಾಂಡ್ ಪಂಪ್ ನಿಂದ ನೀರು ತರಲು ಹೋಗಿದ್ದಾನೆ, ನೀರು ತುಂಬುತ್ತಿದ್ದಾಗ ಆಕಸ್ಮಿಕವಾಗಿ ರಟ್ಟಿರಾಮ್ ಠಾಕೂರ್ ಎಂಬಾತನಿಗೆ ಸೇರಿದ ಬಕೆಟ್ ಟಚ್ ಆಗಿದೆ.
ಇದರಿಂದ ಕೋಪಗೊಂಡ ಠಾಕೂರ್ ಬಾಲಕನ ಮೇಲೆ ದೈಹಿಕವಾಗಿ ಹಲ್ಲೆ ನಡೆಸಿದ್ದಾನೆ ಎಂದು ಮನೆಯವರು ಆರೋಪಿಸಿದ್ದಾರೆ.
ಘಟನೆಯ ಬಗ್ಗೆ ಬಾಲಕ ಕುಟುಂಬದವರಿಗೆ ತಿಳಿಸಿದ್ದು ಅವರು ಠಾಕೂರ್ ಮನೆಗೆ ಕೇಳಲು ಹೋದಾಗ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾರೆ ಎಂಬ ಆರೋಪ ಇದೆ.
ಘಟನೆಯ ಬಗ್ಗೆ ಕುಟುಂಬ ಸದಸ್ಯರು ಶಾಲಾ ಪ್ರಾಂಶುಪಾಲರಿಗೆ ದೂರು ನೀಡಿದಾಗ, ಇದು ಪೊಲೀಸ್ ವಿಷಯ ಎಂದು ಹೇಳಿದ್ದಾರೆ.
ಬಾಲಕನ ತಂದೆ ಪನ್ನಾಲಾಲ್ ಈ ಸಂಬಂಧ
ರಾಮಗಢ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.