Sun. Dec 22nd, 2024

ದಸರಾ ಯುವ ಸಂಭ್ರಮಕ್ಕೆ ಚಾಲನೆ:‌ನಟ ಶ್ರೀಮುರುಳಿ,ರುಕ್ಮಿಣಿ ಸಾಥ್

Share this with Friends

ಮೈಸೂರು: ಮೈಸೂರು ದಸರಾ ಯುವ ಸಂಭ್ರಮಕ್ಕೆ ಅದ್ದೂರಿ ಚಾಲನೆ‌ ದೊರೆತಿದ್ದು,ಖ್ಯಾತ ನಟ ಶ್ರೀಮುರುಳಿ ಮತ್ತು ಖ್ಯಾತ ನಟಿ ರುಕ್ಮಿಣಿ ವಸಂತ್ ಸಾಥ್ ನೀಡಿದರು.

ಸಾವಿರಾರು ಸಂಖ್ಯೆಯಲ್ಲಿ ಯುವಕ,ಯುವತಿಯರು ಪಾಲ್ಗೊಂಡು ಕುಣಿದು ಕುಪ್ಪಳಿಸಿದರು.

ಯುವ ಸಂಭ್ರಮವು ದಸರಾ ಮಹೋತ್ಸವದ ಮೊದಲ ಅದ್ದೂರಿ ಕಾರ್ಯಕ್ರಮವಾಗಿದ್ದು, ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್. ಸಿ ಮಹಾದೇವಪ್ಪ ಕರೆ ನೀಡಿದರು.

ಮಾನಸ ಗಂಗೋತ್ರಿಯ ಬಯಲು ರಂಗಮಂದಿರದಲ್ಲಿ ಆಯೋಜಿಸಲಾಗಿದ್ದ, ಯುವ ಸಂಭ್ರಮ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಯುವಸಂಭ್ರಮದಲ್ಲಿ ಭಾಗವಹಿಸಬೇಕೆಂದು ರಾಜ್ಯದ 470 ಕಾಲೇಜುಗಳಿಂದ ಯುವ ಪ್ರತಿಭೆಗಳು ಅರ್ಜಿ ಸಲ್ಲಿಸಿದ್ದು,150 ಕಾಲೇಜುಗಳು ಆಯ್ಕೆಯಾಗಿವೆ, ಆದರೇ ಯಾವುದೇ ಪ್ರತಿಭೆಗಳಿಗೂ ಮೋಸವಾಗಬಾರದು ಎಂಬ ಕಾರಣದಿಂದ ಯುವ ಸಂಭ್ರಮವನ್ನು ಒಂದು ದಿನ ಹೆಚ್ಚು ಮಾಡಿ ಅವರಿಗೂ ಅವಕಾಶ ಮಾಡಿಕೊಡಲಾಗಿದೆ ಎಂದು ತಿಳಿಸಿದರು.

ಶಾಸಕ ಹರೀಶ್ ಗೌಡ ಮಾತನಾಡಿ, ದಸರಾ ಮಹೋತ್ಸವದ ಯುವಸಂಭ್ರಮ ಯುವಕರಿಗೆ ರಾಸಾದೌತಣವಾಗಿದೆ,ಎಲ್ಲಾ ಯುವಜನರಿಗಾಗಿ ಮಾಡಿರುವ ಕಾರ್ಯಕ್ರಮದಲ್ಲಿ ಕ್ವಾಲಿಟಿ ಇರುವಂತಹ ಕಾರ್ಯಕ್ರಮಗಳಿಗೆ ಅವಕಾಶ ನೀಡಲಾಗಿದೆ
ಎಂದು ಹೇಳಿದರು.

ಖ್ಯಾತ ಕನ್ನಡ ಚಲನಚಿತ್ರ ನಟರಾದ ಶ್ರೀ ಮುರುಳಿ ಮಾತನಾಡಿ, ದಸರಾ ಬಂತೆಂದರೆ ಮೈಸೂರಿನ ಆಡಂಬರವನ್ನು ನೋಡಲು ಎರಡು ಕಣ್ಣು ಸಾಲದು. ಇಂತಹ ಅದ್ಬುತ ದೃಶ್ಯಗಳು ಪ್ರಪಂಚದಲ್ಲಿ ಎಲ್ಲಿಯೂ ನೋಡಲು ಸಿಗುವುದಿಲ್ಲ ಎಂದು ಬಣ್ಣಿಸಿದರು.

ಖ್ಯಾತ ನಟಿ ರುಕ್ಮಿಣಿ ವಸಂತ್ ಅವರು ಮಾತನಾಡಿ, ವಿಶ್ವ ವಿಖ್ಯಾತ ನಾಡಹಬ್ಬದಲ್ಲಿ ಪಾಲ್ಗೊಂಡಿರುವುದು ಹೆಮ್ಮೆಯ ವಿಷಯವಾಗಿದೆ. ಮೈಸೂರು ಜನತೆ ಯಾವಾಗಲು ನಮ್ಮ ಮೇಲೆ ಚಿತ್ರ ರಂಗದ ಮೇಲೆ ಇಟ್ಟಿರುವ ಪ್ರೀತಿಯನ್ನು ಎಂದೂ ಮರೆಯಲಾರೆ ಎಂದು ತಿಳಿಸಿದರು.

ವಿಧಾನ ಪರಿಷತ್ ಸದಸ್ಯರಾದ ಸಿ ಎನ್ ಮಂಜೇಗೌಡ, ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಅಯೂಬ್ ಖಾನ್, ಕರ್ನಾಟಕ ರಾಜ್ಯ ಗ್ಯಾರೆಂಟಿ ಯೋಜನೆಗಳ ಪ್ರಾಧಿಕಾರದ ಉಪಾಧ್ಯಕ್ಷೆ ಡಾ. ಪುಷ್ಪ ಅಮರ್ ನಾಥ್, ಜಿಲ್ಲಾಧಿಕಾರಿಗಳಾದ ಜಿ. ಲಕ್ಷ್ಮೀ ಕಾಂತ ರೆಡ್ಡಿ, ಜಿ. ಪಂ ಸಿಇಒ ಕೆ. ಎಂ ಗಾಯತ್ರಿ,ಎಸ್ ಪಿ ವಿಷ್ಣುವರ್ಧನ್, ಡಿ ಸಿ ಪಿ ಮುತ್ತುರಾಜ್ ಮತ್ತಿತರ ಅಧಿಕಾರಿಗಳು ಪಾಲ್ಗೊಂಡಿದ್ದರು.


Share this with Friends

Related Post