ದಾವಣಗೆರೆ: ಜಿಲ್ಲೆಯ ರಾಜಕೀಯ ಇತಿಹಾಸದಲ್ಲಿ ಇದೀಗ ಮತ್ತೊಂದು ಕುತೂಹಲಕಾರಿ ಅಧ್ಯಾಯ ಆರಂಭವಾಗಿದೆ. ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಶ್ರೀನಿವಾಸ ಟಿ. ದಾಸಕರಿಯಪ್ಪ ಅವರನ್ನು ಅಭ್ಯರ್ಥಿಯನ್ನಾಗಿ ಘೋಷಿಸುವ ಮೂಲಕ ಬಿಜೆಪಿ ಹೈಕಮಾಂಡ್ ರಾಜ್ಯ ನಾಯಕತ್ವಕ್ಕೆ, ವಿಶೇಷವಾಗಿ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಬಣಕ್ಕೆ ಸ್ಪಷ್ಟ ಸಂದೇಶ ರವಾನಿಸಿದೆ.
ಮರುಕಳಿಸಿದ ಇತಿಹಾಸ: ಲೋಕಸಭೆ ಚುನಾವಣೆಯ ನೆನಪು
ಈ ಹಿಂದಿನ ಘಟನೆಗಳನ್ನು ಗಮನಿಸಿದರೆ, 2024ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿಯೂ ಇಂತಹುದೇ ಹೈಡ್ರಾಮಾ ನಡೆದಿತ್ತು. ಅಂದು ಹಾಲಿ ಸಂಸದ ಜಿ.ಎಂ. ಸಿದ್ದೇಶ್ವರ ಅವರಿಗೆ ಟಿಕೆಟ್ ತಪ್ಪಿಸಿ, ಹೊಸಬರಿಗೆ ನೀಡಬೇಕು ಎಂಬ ಕೂಗು ಕೇಳಿಬಂದಿತ್ತು. ಬಿಎಸ್ ವೈ ಆಪ್ತ ಎಂ.ಪಿ. ರೇಣುಕಾಚಾರ್ಯ ಅವರು ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ ಹೈಕಮಾಂಡ್ ಸಿದ್ದೇಶ್ವರ ಅವರ ಪತ್ನಿ ಗಾಯತ್ರಿ ಸಿದ್ದೇಶ್ವರ ಅವರಿಗೆ ಮಣೆ ಹಾಕಿತ್ತು. ಈ ನಿರ್ಧಾರದ ವಿರುದ್ಧ ರೇಣುಕಾಚಾರ್ಯ ಬಣವು ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿತ್ತು. ಆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಸೋಲು ಅನುಭವಿಸಬೇಕಾಯಿತು.
ಈ ಬಾರಿಯೂ ಹಿನ್ನಡೆ:
ಈಗ ದಾವಣಗೆರೆ ದಕ್ಷಿಣದ ಉಪಚುನಾವಣೆಯಲ್ಲಿಯೂ ಯಡಿಯೂರಪ್ಪ ತಂಡಕ್ಕೆ ಮುಖಭಂಗವಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ರೇಣುಕಾಚಾರ್ಯ ಲಾಬಿ ವಿಫಲ: ಅಜಯ್ ಕುಮಾರ್ ಅವರಿಗೆ ಟಿಕೆಟ್ ಕೊಡಿಸಲು ರೇಣುಕಾಚಾರ್ಯ ಅವರು ದೆಹಲಿ ಮಟ್ಟದಲ್ಲಿ ನಡೆಸಿದ ಪ್ರಯತ್ನಗಳು ಕೈಗೂಡಿಲ್ಲ.
ವಿರೋಧಿ ಬಣಕ್ಕೆ ಮೇಲುಗೈ?
ಘೋಷಿತ ಅಭ್ಯರ್ಥಿ ಶ್ರೀನಿವಾಸ ದಾಸಕರಿಯಪ್ಪ ಅವರು ಜಿಲ್ಲೆಯಲ್ಲಿ ಯಡಿಯೂರಪ್ಪ ಅವರ ನಾಯಕತ್ವದ ವಿರುದ್ಧ ದನಿ ಎತ್ತಿರುವ ‘ರೆಬೆಲ್’ ಗುಂಪಿನಲ್ಲಿ ಗುರುತಿಸಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಜಿ.ಎಂ. ಸಿದ್ದೇಶ್ವರ ಹಾಗೂ ಎಸ್.ಎ. ರವೀಂದ್ರನಾಥ್ ಅವರಂತಹ ಹಿರಿಯ ನಾಯಕರ ಆಶೀರ್ವಾದ ಇವರಿಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಇದು ಸಹಜವಾಗಿಯೇ ಯಡಿಯೂರಪ್ಪ ಅವರ ಪರಮಾಪ್ತ ಎಂ.ಪಿ. ರೇಣುಕಾಚಾರ್ಯ ಅವರಿಗೆ ತೀವ್ರ ನಿರಾಸೆ ಮೂಡಿಸಿದೆ.
ಎಸ್‌ಟಿ ಅಸ್ತ್ರ: ಸಾಮಾನ್ಯ ಕ್ಷೇತ್ರವಾಗಿದ್ದರೂ ಎಸ್‌ಟಿ ಸಮುದಾಯದ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಮೂಲಕ ಹೈಕಮಾಂಡ್ ಹೊಸ ಸಾಮಾಜಿಕ ಸಮೀಕರಣದ ಮೊರೆ ಹೋಗಿದೆ.
ಬಣ ರಾಜಕಾರಣದ ನಡುವೆ ಹೈಕಮಾಂಡ್ ನೇರ ಹಸ್ತಕ್ಷೇಪ
ದಾವಣಗೆರೆ ಟಿಕೆಟ್ ವಿಚಾರದಲ್ಲಿ ಹೈಕಮಾಂಡ್ ಸತತ ಎರಡನೇ ಬಾರಿಗೆ ಯಡಿಯೂರಪ್ಪ ಬಣದ ಶಿಫಾರಸ್ಸನ್ನು ಬದಿಗಿಟ್ಟು ತನ್ನದೇ ಆದ ನಿರ್ಧಾರ ಕೈಗೊಂಡಿರುವುದು ಜಿಲ್ಲಾ ಬಿಜೆಪಿಯಲ್ಲಿ ಹೊಸ ಸಂಚಲನ ಮೂಡಿಸಿದೆ.

