ದಾವಣಗೆರೆ: ಮಧ್ಯಪ್ರಾಚ್ಯದಲ್ಲಿ ಉಲ್ಬಣಿಸಿರುವ ಯುದ್ಧದ ಭೀತಿಯಿಂದಾಗಿ ಯುಎಇ ಪ್ರವಾಸಕ್ಕೆ ಹೋಗಿದ್ದ ದಾವಣಗೆರೆ ಜಿಲ್ಲೆಯ ಜಗಳೂರು ತಾಲ್ಲೂಕು ಸೇರಿದಂತೆ ಸುತ್ತಮುತ್ತಲ ಜಿಲ್ಲೆಗಳ ಒಟ್ಟು 50 ಪ್ರವಾಸಿಗರು ದುಬೈನಲ್ಲಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಪ್ರವಾಸಿಗರನ್ನು ಸುರಕ್ಷಿತವಾಗಿ ಭಾರತಕ್ಕೆ ಕರೆತರಲು ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವ ಡಾ. ಎಸ್. ಜೈಶಂಕರ್ ಅವರು ತಕ್ಷಣ ಹಸ್ತಕ್ಷೇಪ ಮಾಡಬೇಕೆಂದು ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ ಮನವಿ ಮಾಡಿದ್ದಾರೆ.
ಪ್ರವಾಸದ ಹಿನ್ನೆಲೆ:
ದಾವಣಗೆರೆ, ಬಳ್ಳಾರಿ ಮತ್ತು ಚಿತ್ರದುರ್ಗ ಜಿಲ್ಲೆಗಳ 50 ಪ್ರವಾಸಿಗರ ತಂಡವು ಫೆಬ್ರವರಿ 23, 2026 ರಂದು ಬೆಂಗಳೂರಿನಿಂದ ಯುಎಇ ಪ್ರವಾಸಕ್ಕೆ ತೆರಳಿತ್ತು. ಇದರಲ್ಲಿ 15 ಮಂದಿ ಜಗಳೂರು ತಾಲ್ಲೂಕಿನವರಾಗಿದ್ದು, ಉಳಿದ 35 ಮಂದಿ ನೆರೆಯ ಜಿಲ್ಲೆಗಳವರಾಗಿದ್ದಾರೆ. ಇವರ ಪ್ರವಾಸ ಮುಗಿಸಿ ಫೆಬ್ರವರಿ 28ರಂದು ರಾತ್ರಿ 9:30ಕ್ಕೆ ಭಾರತಕ್ಕೆ ವಾಪಸಾಗಬೇಕಿತ್ತು.

ವಿಮಾನ ರದ್ದು – ಸಂಕಷ್ಟ:
ಮಧ್ಯಪ್ರಾಚ್ಯದಲ್ಲಿ ಇಸ್ರೇಲ್ ಮತ್ತು ಇರಾನ್ ನಡುವೆ ಯುದ್ಧದ ವಾತಾವರಣ ನಿರ್ಮಾಣವಾಗಿರುವ ಕಾರಣ ವೈಮಾನಿಕ ಸಂಚಾರದಲ್ಲಿ ಭಾರೀ ವ್ಯತ್ಯಯ ಉಂಟಾಗಿದೆ. ಅಂತಿಮ ಕ್ಷಣದಲ್ಲಿ ಇವರ ವಾಪಸಾತಿ ವಿಮಾನ ರದ್ದಾಗಿದ್ದು, ಪ್ರವಾಸಿಗರು ದುಬೈನಲ್ಲಿ ದಿಕ್ಕುತೋಚದಂತಾಗಿದ್ದಾರೆ.
ಸಂಸದರ ತುರ್ತು ಪತ್ರ:
ವಿಷಯ ತಿಳಿಯುತ್ತಿದ್ದಂತೆಯೇ ಕಾರ್ಯಪ್ರವೃತ್ತರಾದ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ ಅವರು, ಮಾರ್ಚ್ 1ರಂದು ಕೇಂದ್ರ ಸಚಿವರಿಗೆ ತುರ್ತು ಪತ್ರ ಬರೆದಿದ್ದಾರೆ. “ಮಧ್ಯಪ್ರಾಚ್ಯದ ಯುದ್ಧದ ಪರಿಸ್ಥಿತಿಯಿಂದಾಗಿ ನಮ್ಮ ಭಾಗದ ನಾಗರಿಕರು ಸಂಕಷ್ಟದಲ್ಲಿದ್ದಾರೆ. ದುಬೈನಲ್ಲಿರುವ ಭಾರತೀಯ ರಾಯಭಾರ ಕಚೇರಿ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿ, ಪ್ರವಾಸಿಗರ ಸುರಕ್ಷತೆ ಹಾಗೂ ಶೀಘ್ರ ವಾಪಸಾತಿಗಾಗಿ ಅಗತ್ಯ ಕ್ರಮ ಕೈಗೊಳ್ಳಬೇಕು” ಎಂದು ಪತ್ರದಲ್ಲಿ ಒತ್ತಾಯಿಸಿದ್ದಾರೆ.

ಈ ಹಿಂದೆ ಆಫ್ರಿಕಾದ ಚಾಡ್ ದೇಶದಲ್ಲಿ ಸಿಲುಕಿದ್ದ ಹಕ್ಕಿ ಪಿಕ್ಕಿ ಜನರನ್ನು ರಕ್ಷಿಸುವಲ್ಲಿ ಸಂಸದರು ಯಶಸ್ವಿಯಾಗಿದ್ದರು. ಅದೇ ಮಾದರಿಯಲ್ಲಿ ಈಗ ದುಬೈನಲ್ಲಿರುವವರನ್ನೂ ಸುರಕ್ಷಿತವಾಗಿ ಕರೆತರಲಾಗುವುದು ಎಂದು ಸಂಸದರ ಕಚೇರಿ ಮೂಲಗಳು ತಿಳಿಸಿವೆ.

