ಬೆಳಗಾವಿ: ಬೆಂಗಳೂರಿನ ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯ ಸಹಯೋಗದೊಂದಿಗೆ ರಾಜ್ಯದ ಇನ್ನಿತರೆ ಜಿಲ್ಲೆಗಳಲ್ಲಿ ಕ್ಯಾನ್ಸರ್ ಕೇಂದ್ರಗಳನ್ನು ಪ್ರಾರಂಭಿಸಲು ಕ್ರಮವಹಿಸುತ್ತಿದ್ದು, ರಾಜ್ಯದ ಎಲ್ಲಾ ಜಿಲ್ಲಾ ಆಸ್ಪತ್ರೆಗಳಲ್ಲಿಯೂ ಡೇ ಕೇರ್ ಕೀಮೋಥೆರಪಿ ಕೇಂದ್ರಗಳನ್ನು ಸ್ಥಾಪಿಸಲು ಉದ್ದೇಶಿಸಲಾಗಿದೆ ಎಂದು ವೈದ್ಯಕೀಯ ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಸಚಿವ ಡಾ. ಶರಣಪ್ರಕಾಶ ಆರ್. ಪಾಟೀಲ ತಿಳಿಸಿದ್ದಾರೆ.
ವಿಧಾನ ಪರಿಷತ್ ನಲ್ಲಿ ಕುಶಾಲಪ್ಪ ಎಂ. ಪಿ. ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿದ ಅವರು,ಕಳೆದ ಮೂರು ವರ್ಷಗಳ ಅವಧಿಯಲ್ಲಿ ಒಟ್ಟು 41,512 ಕ್ಯಾನ್ಸರ್ ರೋಗಿಗಳು ಕಿದ್ವಾಯಿ ಸ್ಮಾರಕ -ಗ್ರಂಥಿ ಸಂಸ್ಥೆಯಲ್ಲಿ ವಿವಿಧ ರೀತಿಯ ಕ್ಯಾನ್ಸರ್ ಚಿಕಿತ್ಸೆಗಳನ್ನು ಗಳ ಪಡೆದಿದ್ದು, ಮುಖ್ಯವಾಗಿ ಶಸ್ತ್ರಚಿಕಿತ್ಸೆ, ವಿಕಿರಣ ಚಿಕಿತ್ಸೆ ಹಾಗೂ ಕಿಮೋಥೆರಪಿ ಅಥವಾ ಇವುಗಳ ಸಂಯೋಜಿತ ಚಿಕಿತ್ಸೆಯನ್ನು ಕ್ಯಾನ್ಸರ್ ವಿಧ ಅಥವಾ ಕ್ಯಾನ್ಸರ್ ಹಂತದ ಅನುಗುಣವಾಗಿ ನೀಡಲಾಗಿದೆ.2022 ರಿಂದ 2024 ವರೆಗೆ 12781 ರೋಗಿಗಳು ಶಸ್ತ್ರ ಚಿಕಿತ್ಸೆಯನ್ನು, 14423 ರೋಗಿಗಳು ವಿಕಿರಣ ಚಿಕಿತ್ಸೆ ಹಾಗೂ 28370 ಕ್ಕೂ ಅಧಿಕ ರೋಗಿಗಳು ರಾಸಾಯನಿಕ (ಕಿಮೋಥೆರಪಿ) ಚಿಕಿತ್ಸೆಯನ್ನು ಪಡೆದಿರುತ್ತಾರೆ.ಅಲ್ಲದೆ 110 ಕ್ಕೂ ಅಧಿಕ ರೋಗಿಗಳಿಗೆ ದುಬಾರಿ ಚಿಕಿತ್ಸೆಯಾದ ಅಸ್ಥಿಮಜ್ಞೆ ಚಿಕಿತ್ಸೆಯನ್ನು ಉಚಿತವಾಗಿ ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯಲ್ಲಿ 2022 ರಿಂದ 2024 ರವರೆಗೂ ನೀಡಲಾಗಿದೆ ಎಂದು ತಿಳಿಸಿದರು.
ಕಿದ್ವಾಯಿ ಆಸ್ಪತ್ರೆಗೆ ಇತರೆ ಜಿಲ್ಲೆಗಳಿಂದ ರೋಗಿಗಳನ್ನು ಕರೆತರಲು ಕಷ್ಟವಾಗುತ್ತಿದ್ದು, ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆ, ಬೆಂಗಳೂರು ಸಹಯೋಗದೊಂದಿಗೆ ರಾಜ್ಯದ ಇನ್ನಿತರೆ ಜಿಲ್ಲೆಗಳಲ್ಲಿ ಕ್ಯಾನ್ಸರ್ ಕೇಂದ್ರಗಳನ್ನು ಪ್ರಾರಂಭಿಸಲು ಕ್ರಮವಹಿಸಲಾಗುತ್ತಿದೆ.ಕಲ್ಬುರ್ಗಿಯಲ್ಲಿ ಪೆರಿಫೆರಲ್ ಕ್ಯಾನ್ಸರ್ ಕೇಂದ್ರವನ್ನು 1990ರಲ್ಲಿ ಸ್ಥಾಪಿಸಲಾಗಿದ್ದು, ಸದರಿ ಕೇಂದ್ರವನ್ನು ಮೇಲ್ದರ್ಜೆಗೇರಿಸಲು ಈಗಾಗಲೇ ಆಡಳಿತಾತ್ಮಕ ಅನುಮೋದನೆ ನೀಡಿ ಆದೇಶಿಸಲಾಗಿದ್ದು, ಸಿವಿಲ್ ಕಾಮಗಾರಿಯು ಪ್ರಗತಿಯಲ್ಲಿದೆ.ಮೈಸೂರು, ತುಮಕೂರು, ಶಿವಮೊಗ್ಗ, ಬೆಳಗಾವಿ ಈ ಜಿಲ್ಲೆಗಳಲ್ಲಿ ಪ್ರಾದೇಶಿಕ ಕ್ಯಾನ್ಸರ್ ಕೇಂದ್ರಗಳನ್ನು ಪ್ರಾರಂಭಿಸಲು ಆಡಳಿತಾತ್ಮಕ ಅನುಮೋದನೆ ನೀಡಿ ಆದೇಶಿಸಲಾಗಿದೆ.ರಾಯಚೂರಿನ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಆವರಣದಲ್ಲಿ ಹಾಗೂ ಬೀದರ್ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಆವರಣದಲ್ಲಿ ಪ್ರಾದೇಶಿಕ ಕ್ಯಾನ್ಸರ್ ಕೇಂದ್ರಗಳನ್ನು ಪ್ರಾರಂಭಿಸಲು ಆಡಳಿತಾತ್ಮಕ ಅನುಮೋದನೆಯನ್ನು ನೀಡಲಾಗಿದೆ ಎಂದರು.
ಹಾಸನ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಹಾಸನ, ಬಳ್ಳಾರಿ ವೈದ್ಯಕೀಯ ಮಹಾ ವಿದ್ಯಾಲಯ ಮತ್ತು ಸಂಶೋಧನಾ ಕೇಂದ್ರ, ಬಳ್ಳಾರಿ, ಕರ್ನಾಟಕ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಹುಬ್ಬಳ್ಳಿ, ಈ ಸಂಸ್ಥೆಗಳಲ್ಲಿ ಕ್ಯಾನ್ಸರ್ ಚಿಕಿತ್ಸೆ ಸೌಲಭ್ಯವಿರುವ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ.ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಮಂಡ್ಯ, ಕಾರವಾರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಕಾರವಾರ ಇಲ್ಲಿ ಶೀಘ್ರದಲ್ಲೇ ಚಿಕಿತ್ಸೆ ಪ್ರಾರಂಭಿಸಲು ಕ್ರಮವಹಿಸಲಾಗುವುದು ಎಂದರು.
ಪ್ರಾಯೋಗಿಕವಾಗಿ ಕೌಶಲ್ಯ ರಥ ಕಾರ್ಯಕ್ರಮ:
ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮದಿಂದ ಕೌಶಲ್ಯ ರಥ ಕಾರ್ಯಕ್ರಮವನ್ನು ರಾಯಚೂರು, ಯಾದಗಿರಿ, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಪ್ರಾಯೋಗಿಕವಾಗಿ ಅನುಷ್ಠಾನಗೊಳಿಸಲಾಗಿರುತ್ತದೆ ಎಂದು ವೈದ್ಯಕೀಯ ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಸಚಿವ ಡಾ. ಶರಣಪ್ರಕಾಶ ಆರ್ ಪಾಟೀಲ್ ಹೇಳಿದರು.
ಪರಿಷತ್ತಿನಲ್ಲಿ ಪ್ರಶ್ನೋತ್ತರ ವೇಳೆ ಸದಸ್ಯರಾದ ಗೋವಿಂದ ರಾಜು ಅವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ಈ ಕಾರ್ಯಕ್ರಮವನ್ನು ಜಿಲ್ಲಾ ಕೇಂದ್ರಗಳಲ್ಲಿ ಕೌಶಲ್ಯ ತರಬೇತಿ ಕೇಂದ್ರಗಳಿಗೆ ತಾಲ್ಲೂಕು ಹಾಗೂ ಅತಿ ಹಿಂದುಳಿದ ಗ್ರಾಮೀಣ ಪ್ರದೇಶದ ಯುವಕ-ಯುವತಿಯರಿಗೆ ಕೌಶಲ್ಯ ತರಬೇತಿಯನ್ನು ಪಡೆಯಲು ಪೂರಕವಾಗುವಂತೆ ಅವರಿರುವ ಸ್ಥಳಕ್ಕೆ ತೆರಳಿ ತರಬೇತಿ ನೀಡುವ ಸಂಬಂಧ ಸ್ಕಿಲ್ಸ್ ಆನ್ ವೀಲ್ಸ್ (ಕೌಶಲ್ಯ ರಥ / ನೈಪುಣ್ಯ ರಥ) ವಿನೂತನ ಯೋಜನೆಯನ್ನು ಅನುಷ್ಠಾನಗೊಳಿಸಿದೆ.
ರಾಜ್ಯದ ಗ್ರಾಮೀಣ ಯುವಜನರಿಗೆ ಅಲ್ಪಾವಧಿ ಕೌಶಲ್ಯಾಧಾರಿತ ತರಬೇತಿಯೊಂದಿಗೆ ಜೀವನೋಪಾಯದ ಅವಕಾಶಗಳನ್ನು ಹೆಚ್ಚಿಸುವ ಉದ್ದೇಶ ಈ ಕಾರ್ಯಕ್ರಮದ್ದಾಗಿದೆ.2022-23ನೇ ಸಾಲಿನಲ್ಲಿ ಯಾದಗಿರಿ ಹಾಗೂ ರಾಯಚೂರು ಜಿಲ್ಲೆಗಳಲ್ಲಿ ತಲಾ 75 ಅಭ್ಯರ್ಥಿಗಳಿಗೆ ಅನುಕ್ರಮವಾಗಿ ಅಸಿಸ್ಟಂಟ್ ಬ್ಯೂಟಿ ಥೆರಪಿಸ್ಟ್ ಅಂಡ್ ಅಸಿಸ್ಟಂಟ್ ಎಲೆಕ್ಟ್ರಿಷಿಯನ್ (Assistant Beauty Therapist & Assistant Electrician) ಜಾಬ್ ರೋಲ್ ನಡಿ ಹಾಗೂ 2023-24ನೇ ಸಾಲಿನಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 45 ಅಭ್ಯರ್ಥಿಗಳು ಮತ್ತು ಉಡುಪಿ ಜಿಲ್ಲೆಯಲ್ಲಿ 60 ಅಭ್ಯರ್ಥಿಗಳಿಗೆ ಅನುಕ್ರಮವಾಗಿ ಅಸಿಸ್ಟಂಟ್ ಎಲೆಕ್ಟ್ರಿಷಿಯನ್ ಅಂಡ್ ಅಸಿಸ್ಟಂಟ್ ಬ್ಯೂಟಿ ಥೆರಪಿಸ್ಟ್ ಜಾಬ್ ರೋಲ್ ನಡಿ ತರಬೇತಿಯನ್ನು ನೀಡಲಾಗಿದೆ ಎಂದು ಸಚಿವರು ಮಾಹಿತಿ ನೀಡಿದರು.

