ಬೆಂಗಳೂರು, ಜು.14: ತಮಿಳುನಾಡಿಗೆ ಪ್ರತಿದಿನ ಒಂದು ಟಿಎಂಸಿ ನೀರು ಬಿಡದಿರಲು ಸರ್ವಪಕ್ಷ ಸಭೆಯಲ್ಲಿ ತೀರ್ಮಾನಿಸಿದ್ದೇವೆ ಎಂದು ಮುಖ್ಯ ಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಸಿಡಬ್ಲ್ಯು ಆರ್ ಸಿ ತಮಿಳು ನಾಡಿಗೆ ಒಂದು ಟಿಎಂಸಿ ನೀರು ಬಿಡುವಂತೆ ಆದೇಶಿಸಿದ್ದರ ಹಿನ್ನೆಲೆಯಲ್ಲಿ ಸಿಎಂ ಇಂದು ಸರ್ವಪಕ್ಷ ಸಭೆ ಕರೆದಿದ್ದರು.
ಸಭೆ ಮುಗಿದ ನಂತರ ಮಾಧ್ಯಮದವರೊಂದಿಗೆ ಸಭೆಯ ವಿವರ ನೀಡಿದ ಸಿಎಂ,ಜು.11 ಕಾವೇರಿ ನೀರು ನಿಯಂತ್ರಣ ಸಮಿತಿಯು ಜುಲೈ 12 ರಿಂದ ಈ ತಿಂಗಳ ಕೊನೆಯವರೆಗೆ ಪ್ರತೀ ದಿನ 1ಟಿಎಂಸಿ ಯಂತೆ 20 ಟಿಎಂಸಿ ನೀರು ಬಿಡಲು ಆದೇಶಿಸಿತ್ತು.
ಜೂನ್ ತಿಂಗಳಲ್ಲಿ 9.4 ಟಿಎಂಸಿ,ಜುಲೈ ನಲ್ಲಿ 31.24 ಟಿಎಂಸಿ ನೀರು ಬಿಡಬೇಕಾಗಿದೆ. ಅಂದರೆ ಒಟ್ಟು 40.43 ಟಿಎಂಸಿ ಬಿಡಬೇಕಾಗಿದೆ,ಆದರೆ ಇಲ್ಲಿಯತನಕ 5 ಟಿಎಂಸಿ ಗೂ ಹೆಚ್ಚು ನೀರು ಬಿಡಲು ಸಾಧ್ಯವಾಗಿದೆ ಎಂದು ತಿಳಿಸಿದರು.
ಕಾವೇರಿ ತೀರದ ಸಚಿವರು, ಶಾಸಕರು ಮತ್ತು ಸಂಬಂಧಪಟ್ಟ ಅಧಿಕಾರಿಗಳು ನೀರು ಬಿಡದೇ ಇರಲು ಮತ್ತು ಸರ್ವಪಕ್ಷ ಸಭೆ ಕರೆಯಲು ತೀರ್ಮಾನಿಸಿದ್ದೆವು.
ಅದರಂತೆ ಇಂದು ಸರ್ವಪಕ್ಷ ಸಭೆ ಕರೆಯಲಾಯಿತು. ಬಿಜೆಪಿ, ಜೆಡಿಎಸ್, ರೈತ ಸಂಘದವರು, ಕಾನೂನು ತಂಡದ ಮುಖ್ಯಸ್ಥರಾದ ಮೋಹನ್ ಕಾತರಕಿ ಅವರು ಸೇರಿ ಹಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದು ಹೇಳಿದರು.
ನಮ್ಮ ಕಾವೇರಿ ತೀರದ ಜಲಾಶಯಗಳಲ್ಲಿ ಶೇ. 63 ರಷ್ಟು ಮಾತ್ರ ನೀರು ಭರ್ತಿ ಆಗಿದೆ,
ಕಬಿನಿ ಜಲಾಶಯ ಭರ್ತಿ ಯಾಗಿದೆ ಆದರೆ ಜಲಾಶಯದ ಸುರಕ್ಷತೆಗಾಗಿ ಶೇಖರಿಸಿಡಲು ಸಾಧ್ಯವಾಗದ ನೀರನ್ನು ಮಾತ್ರ ಹರಿಯಬಿಡಲಾಗಿದೆ ಎಂದು ಸಿಎಂ ತಿಳಿಸಿದರು.
ವಕೀಲರ ತಂಡದ ಸಲಹೆ ಪ್ರಕಾರ ಹೆಚ್ಚು ಮಳೆ ಬಿದ್ದರೆ ಮಾತ್ರ ಮಳೆ ಪ್ರಮಾಣಕ್ಕೆ ತಕ್ಕಂತೆ, ಸಿಡಬ್ಲ್ಯುಎಂಸಿ ಆದೇಶದ ಪ್ರಕಾರ ಪೂರ್ತಿ ನೀರು ಹರಿಸಬಹುದು, ಇಲ್ಲದಿದ್ದರೆ ಕೇವಲ 8 ಸಾವಿರ ಕ್ಯೂಸೆಕ್ ನೀರು ಬಿಡಬೇಕಾಗುತ್ತದೆ ಇದರ ಜೊತೆಗೆ ಮೇಲ್ಮನವಿ ಹಾಕೋಣ, ನಾವು ಮೊಂಡಾಟ ಮಾಡುತ್ತಿದ್ದೇವೆ ಎಂದು ಸಿಡಬ್ಲ್ಯುಎಂಸಿ ಗೆ
ಅನ್ನಿಸಬಾರದು ಎಂಬ ಸಲಹೆ ಬಂದಿದೆ ಎಂದು ಸಿದ್ದರಾಮಯ್ಯ ವಿವರಿಸಿದರು.
ನಾವು ಸರ್ವಪಕ್ಷ ಸಭೆಯ ತೀರ್ಮಾನಕ್ಕೆ ಬಂದಿದ್ದೇವೆ,ತಮಿಳುನಾಡಿಗೆ ಪ್ರತಿನಿತ್ಯ ಎಂಟು ಸಾವಿರ ಕ್ಯೂಸೆಕ್ ಬಿಡಲು ನಿರ್ಧರಿಸಿದ್ದೇವೆ,ಹಾಗೆಯೇ ಸಿಡಬ್ಲ್ಯುಎಂಸಿ ಗೆ ಮೇಲ್ಮನವಿ ಸಲ್ಲಿಸುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.