ಮೈಸೂರು: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದಿರುವ ಕಾರು ಸ್ಪೋಟ ಪ್ರಕರಣ ಇವತ್ತಿನ ಬಿಹಾರ ಚುನಾವಣೆಯ ಮೇಲೆ ಪ್ರಭಾವ ಬೀರಬಹುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಪ್ರಾಯಪಟ್ಟಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು,ದೇಶದಲ್ಲಿ ಚುನಾವಣೆ ವೇಳೆಯಲ್ಲೇ ಏಕೆ ಬಾಂಬ್ ಬ್ಲಾಸ್ಟ್ ಗಳು ಆಗುತ್ತಿವೆ ? ಈ ಬಾಂಬ್ ಬ್ಲಾಸ್ಟ್ ಗಳ ಬಗ್ಗೆ ಕೇಂದ್ರ ಸರ್ಕಾರವೇ ಹೇಳಬೇಕು. ಕೇಂದ್ರವೇ ತನಿಖೆ ನಡೆಸಿ ಉತ್ತರಿಸಬೇಕು ಆದರೆ ನೆನ್ನೆಯ ದೆಹಲಿ ಬ್ಲಾಸ್ಟ್ ಇವತ್ತಿನ ಬಿಹಾರ ಚುನಾವಣೆಯ ಮೇಲೆ ಪ್ರಭಾವ ಬೀರಬಹುದು ಎನಿಸುತ್ತದೆ.ಆದರೆ ಎಲ್ಲಿಯೂ ಬಾಂಬ್ ಬ್ಲಾಸ್ಟ್ ಘಟನೆಗಳು ಆಗಬಾರದು. ಅಮಾಯಕರ ಜೀವಹಾನಿ ಬೇಸರದ ಸಂಗತಿಯಾಗಿದೆ ಎಂದರು.
ಡ್ರಗ್ ಮುಕ್ತ ಮೈಸೂರು:
ಪೊಲೀಸ್ ಅಧಿಕಾರಿಗಳಿಗೆ ಗೊತ್ತಿಲ್ಲದೆ ಸಂಘಟಿತ ಅಪರಾಧಗಳು ನಡೆಯಲು ಸಾಧ್ಯವಿಲ್ಲ. ಆದ್ದರಿಂದ ಅಪರಾಧ ಪ್ರಮಾಣಗಳು ಹೆಚ್ಚಾದರೆ ಪೊಲೀಸ್ ಅಧಿಕಾರಿಗಳೇ ಹೊಣೆ ಆಗ್ತಾರೆ. ಮೈಸೂರು ಜಿಲ್ಲೆಯನ್ನು ಡ್ರಗ್ ಮುಕ್ತ ಜಿಲ್ಲೆ ಮಾಡಲು ಸೂಚನೆ ನೀಡಿದ್ದೇನೆ ಎಂದು ಸಿಎಂ ಸ್ಪಷ್ಟಪಡಿಸಿದರು.
ಕೋಮುಗಲಭೆ ಪೀಡಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಬ್ಬರು ಅಧಿಕಾರಿಗಳನ್ನು ಬದಲಾಯಿಸಿದ ತಕ್ಷಣ ಇಡೀ ಜಿಲ್ಲೆಯಲ್ಲಿ ಈಗ ಅನಾಗರಿಕ ಘಟನೆಗಳು ಬಂದ್ ಆಗಿವೆ. ಅಲ್ಲಿ ಇಬ್ಬರು ಅಧಿಕಾರಿಗಳಿಂದ ಇಷ್ಟೆಲ್ಲಾ ಸಾಧ್ಯ ಆಗುತ್ತೆ ಎನ್ನುವುದಾದರೆ ಉಳಿದ ಕಡೆಗಳಲ್ಲೂ ಸಾಧ್ಯವಿದೆ. ಪೊಲೀಸ್ ಅಧಿಕಾರಿಗಳು ಮನಸ್ಸು ಮಾಡಿ, ವೃತ್ತಿಪರವಾಗಿ ನಡೆದುಕೊಂಡರೆ ಸಾಕು ಎನ್ನುವ ಸೂಚನೆ ನೀಡಿದ್ದೇನೆ ಎಂದರು.
ಜನರನ್ನು ಅಲೆದಾಡಿಸುವುದು ಅಕ್ಷಮ್ಯ:
ಜಿಲ್ಲೆಯ ಅಭಿವೃದ್ಧಿ ಜೊತೆಗೆ ಮೈಸೂರು ಜನತೆಯ ಸಮಸ್ಯೆಗಳನ್ನು ಆಲಿಸುವ ಮತ್ತು ಪರಿಹಾರ ಒದಗಿಸುವ ಕೆಲಸವೂ ಆಗಬೇಕು.ಮೈಸೂರಿನ ಜನತೆ, ನನ್ನನ್ನು ಹುಡುಕಿಕೊಂಡು ಬೆಂಗಳೂರಿಗೆ ತುಂಬಾ ಮಂದಿ ಬರ್ತಾರೆ. ನಾನು ಬೆಂಗಳೂರಿನಲ್ಲಿ ಇಲ್ಲದಿದ್ದರೆ ರಾತ್ರಿವರೆಗೂ ನನಗೆ ಕಾಯುತ್ತಾ ಇರುತ್ತಾರೆ. ಮೈಸೂರಿನಲ್ಲೇ ಅವರ ಕೆಲಸಗಳು ಆಗಿದ್ದರೆ, ಮೈಸೂರಿನ ಕಚೇರಿಗಳಲ್ಲೇ ಕುಳಿತು ಅಧಿಕಾರಿಗಳು ಜನರ ಅಹವಾಲು ಕೇಳಿದ್ದರೆ, ಕೇಳಿ ಬಗೆಹರಿಸಿದ್ದರೆ ಅವರು ಮೈಸೂರಿನಿಂದ ಬೆಂಗಳೂರಿನವರೆಗೂ ಹುಡುಕಿಕೊಂಡು ಬರುತ್ತಿರಲಿಲ್ಲ. “ಜನರನ್ನು ಅಲೆದಾಡಿಸುವುದು ಅಕ್ಷಮ್ಯ. ಇದನ್ನು ನಾನು ಸಹಿಸಲ್ಲʼಸಿಇಒ ಮತ್ತು ಇತರೆ ಅಧಿಕಾರಿಗಳು ಆಸ್ಪತ್ರೆ, ಶಾಲೆ, ಹಾಸ್ಟೆಲ್ ಗಳಿಗೆ ಖುದ್ದಾಗಿ ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ಇನ್ಸ್ಪೆಕ್ಟರ್ಗಳು, ಪಿಡಿಒಗಳು, ವಿಎ ಗಳ ಮೇಲೆ ಈ ಬಗ್ಗೆ ಸಿಕ್ಕಾಪಟ್ಟೆ ದೂರುಗಳು ಬರುತ್ತಿವೆ. ಜಿಲ್ಲಾಧಿಕಾರಿಗಳು ತಹಶೀಲ್ದಾರ್ ಕಚೇರಿಗಳಿಗೆ ಗೌಪ್ಯ ಭೇಟಿ ನೀಡಿದರೆ ಕೆಲಸ ಕದಿಯುವ ಅಧಿಕಾರಿಗಳು ಮತ್ತು ಸಿಬ್ಬಂದಿ ಸಿಕ್ಕಿ ಬೀಳುತ್ತಾರೆ ಎಂದು ಸೂಚಿಸಿದ್ದೇನೆ ಎಂದರು.

