ಬೆಳಗಾವಿ:ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ದೆಹಲಿ ನ್ಯಾಯಾಲಯ ನೀಡಿರುವ ತೀರ್ಪು ಕೇಂದ್ರ ಬಿಜೆಪಿಗೆ ಕಪಾಳಮೋಕ್ಷ ಮಾಡಿದಂತಾಗಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾನೂನುಬಾಹಿರವಾಗಿ ವಿರೋಧ ಪಕ್ಷದ ನಾಯಕರನ್ನು ಹೆದರಿಸಲು ಸೃಷ್ಟಿಸಿದ ಒಂದು ನಕಲಿ ಪ್ರಕರಣದ ರಾಜಕೀಯ ಪ್ರೇರಿತ ತನಿಖೆಗೆ ನ್ಯಾಯಾಂಗವೇ ಅಂತ್ಯ ಹಾಡಿದೆ. ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರ ವಿರುದ್ಧದ ಸುಳ್ಳು ಆರೋಪಗಳನ್ನು ಬಳಸಿಕೊಂಡು ಅಧಿಕಾರ ದುರುಪಯೋಗ ಮಾಡುತ್ತಿದ್ದ ಬಿಜೆಪಿಯ ಕುತಂತ್ರಕ್ಕೆ ಇಂದು ದೊಡ್ಡ ಹಿನ್ನಡೆಯಾಗಿದೆ ಎಂದರು.
ಜಾರಿ ನಿರ್ದೇಶನಾಲಯ (ಇಡಿ) ಸಲ್ಲಿಸಿದ್ದ ಪ್ರಾಸಿಕ್ಯೂಷನ್ ದೂರನ್ನು ನ್ಯಾಯಾಲಯ ನಿರಾಕರಿಸಿದ್ದು, ಇ.ಡಿ ಪಿಎಂಎಲ್‌ಎ (PMLA) ಅಡಿಯಲ್ಲಿ ನಿಗದಿತ ಅಪರಾಧಕ್ಕೆ ಸಂಬಂಧಿಸಿದ ಎಫ್‌ಐಆರ್ (FIR) ಅನ್ನು ಆಧರಿಸಿಲ್ಲ ಎಂಬುದು ಸ್ಪಷ್ಟವಾಗಿದೆ. ಅಂದರೆ, ಬಿಜೆಪಿಯ ಕೈಗೊಂಬೆಯಂತೆ ವರ್ತಿಸುವ ಇಡಿ, ಕಾನೂನಿನ ಮೂಲಭೂತ ನಿಯಮಗಳನ್ನೇ ಗಾಳಿಗೆ ತೂರಿದೆ. FIR ಇಲ್ಲದೆ, ಕೇವಲ ಖಾಸಗಿ ದೂರನ್ನು ಆಧರಿಸಿ, ವಿರೋಧಿಗಳನ್ನು ಹತ್ತಿಕ್ಕಲು ಇಂತಹ ಕಠಿಣ ಕಾನೂನುಗಳನ್ನು ದುರುಪಯೋಗಪಡಿಸಿಕೊಂಡಿರುವುದು ಬಿಜೆಪಿಯ ಸೇಡಿನ ರಾಜಕಾರಣದ ದುರುದ್ದೇಶವನ್ನು ಸಾಬೀತುಪಡಿಸುತ್ತದೆ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಆದಿಯಾಗಿ ಕೇಂದ್ರ ಬಿಜೆಪಿಯ ನಾಯಕರಿಗೆ ನೇರವಾಗಿ ಹೇಳಬಯಸುತ್ತೇನೆ, IT, ED, CBI ಸಂಸ್ಥೆಗಳನ್ನು ದುರುಪಯೋಗ ಮಾಡಿಕೊಂಡು ನಮ್ಮ ನಾಯಕತ್ವವನ್ನು ಹೆದರಿಸಲು ಸಾಧ್ಯವಿಲ್ಲ. ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿ ಅವರ ಹೋರಾಟ ನ್ಯಾಯದ ಪರವಾಗಿದೆ. ಸತ್ಯ ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳನ್ನು ಎತ್ತಿಹಿಡಿಯಲು ನಮ್ಮ ಹೋರಾಟ ನಿರಂತರವಾಗಿರುತ್ತದೆ. ಅಂತಿಮವಾಗಿ ಗೆಲುವು ಸತ್ಯಕ್ಕೆ ಹೊರತು ಸಂಚಿಗಲ್ಲ ಎಂದು ಬಿಜೆಪಿಯ ತಂತ್ರಗಾರಿಕೆಗೆ ಟಕ್ಕರ್ ನೀಡಿದರು.

