ಬೆಂಗಳೂರು, ಮೇ.18: ದೇವರಾಜೇಗೌಡ ಒಬ್ಬ ಮಾನಸಿಕ ಅಸ್ವಸ್ಥ, ಅವರಿಗೆ ಸೂಕ್ತ ಚಿಕಿತ್ಸೆ ಕೊಡಿಸಬೇಕಿದೆ ಎಂದು ಡಿಸಿಎಂ ಡಿ.ಕೆ.
ಶಿವಕುಮಾರ್ ಹೇಳಿದರು.
ಹಾಸನ ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ಅವರ ರಾಸಲೀಲೆ ಪೆನ್ ಡ್ರೈವ್ ಹಂಚಿಕೆಯಲ್ಲಿ ತಮ್ಮ ಪಾತ್ರ ಖಂಡಿತಾ ಇಲ್ಲ, ದೇವರಾಜೇಗೌಡ ಒಬ್ಬ ಮಾನಸಿಕ ಅಸ್ವಸ್ಥ, ಅದಕ್ಕೆ ಏನೇನೊ ಹೇಳುತ್ತಾರೆ ಎಂದು ತಿಳಿಸಿದರು.
ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಂಧಿತರಾಗಿರುವ ಬಿಜೆಪಿ ಮುಖಂಡ ಮತ್ತು ವಕೀಲ ಜಿ ದೇವರಾಜೇಗೌಡ ಅವರು, ಪೆನ್ ಡ್ರೈವ್ ಹಂಚಿಕೆಯಲ್ಲಿ ಶಿವಕುಮಾರ್ ಮತ್ತು ಇತರ ನಾಲ್ವರು ಸಚಿವರ ಕೈವಾಡವಿದೆ ಎಂದು ಶುಕ್ರವಾರ ಆರೋಪಿಸಿದ್ದರು.
ಪ್ರಜ್ವಲ್ ರೇವಣ್ಣ ಅವರ ಅಶ್ಲೀಲ ವಿಡಿಯೋ ಪ್ರಕರಣದಲ್ಲಿ ಬಿಜೆಪಿ ಮತ್ತು ಪ್ರಧಾನಿ ನರೇಂದ್ರ ಮೋದಿಗೆ ಕೆಟ್ಟ ಹೆಸರು ತರಲು ಮತ್ತು ಜೆಡಿಎಸ್ ನಾಯಕ ಎಚ್.ಡಿ ಕುಮಾರಸ್ವಾಮಿ ಅವರ ಹೆಸರನ್ನು ಕೆಡಿಸಲು ಡಿ.ಕೆ ಶಿವಕುಮಾರ್ ತಮಗೆ 100 ಕೋಟಿ ರೂ. ಆಫರ್ ನೀಡಿದ್ದರು ಎಂದು ದೇವರಾಜೇಗೌಡ ಆರೋಪಿಸಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಪ್ರತಿಕ್ರಿಯಿಸಿದ ಡಿಕೆಶಿ, ಲೋಕಾಯುಕ್ತ ಅಥವಾ ಇನ್ನಾವುದೇ ಏಜೆನ್ಸಿಯ ಮುಂದೆ ಪ್ರಕರಣ ದಾಖಲಿಸಲಿ,ಅವರಿಗೆ ಮಾನಸಿಕವಾಗಿ ಕೆಲವು ಸಮಸ್ಯೆಗಳಿವೆ ಎಂದು ನಾನು ಭಾವಿಸುತ್ತೇನೆ ಎಂದು ದೇವರಾಜೇಗೌಡರಿಗೆ ಟಾಂಗ್ ನೀಡಿದರು.
ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತ ಮಹಿಳೆಯರಿಗೆ ನ್ಯಾಯ ದೊರಕಿಸಿಕೊಡಲು ನಮ್ಮ ಸರ್ಕಾರ ಬದ್ಧವಾಗಿದೆ ಎಂದು ತಿಳಿಸಿದ ಶಿವಕುಮಾರ್,ವಿಶೇಷ ತನಿಖಾ ತಂಡ ನಡೆಸುತ್ತಿರುವ ತನಿಖೆಯ ಬಗ್ಗೆ ವಿಶ್ವಾಸವಿದೆ ಎಂದು ಹೇಳಿದರು.