Fri. Nov 1st, 2024

ಪ್ರಜ್ವಲ್ ಗೆ ಕೊನೆ ಎಚ್ಚರಿಕೆ ಕೊಟ್ಟ ದೇವೇ ಗೌಡರು

Share this with Friends

ಬೆಂಗಳೂರು,ಮೇ.23: ಪೆನ್ ಡ್ರೈವ್ ಪ್ರಕರಣ ಸಂಬಂಧ ಕೂಡಲೇ ವಾಪಸ್ ಬಂದು ಎಸ್ಐಟಿ ಎದುರು ಹಾಜರಾಗುವಂತೆ ಸಂಸದ ಪ್ರಜ್ವಲ್ ರೇವಣ್ಣಗೆ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಹೆಚ್.ಡಿ.ದೇವೇಗೌಡರು ತಾಕೀತು ಮಾಡಿದ್ದಾರೆ.

ಈ ಬಗ್ಗೆ ಮಾಧ್ಯಮ ಪ್ರಕಟಣೆ ಹೊರಡಿಸಿರುವ ಗೌಡರು, ನನ್ನ ಮೇಲೆ ಗೌರವ ಇದ್ದರೆ ತಕ್ಷಣವೇ ಮರಳಿ ಬಾ ಎಂದು ಪ್ರಜ್ವಲ್ ರೇವಣ್ಣನಿಗೆ ಎಚ್ಚರಿಕೆ ನೀಡಿದ್ದಾರೆ.

ನಾನು ಮೇ 18ನೇ ತಾರೀಖಿನಂದು ದೇವಸ್ಥಾನಕ್ಕೆ ಹೊರಟಿದ್ದ ಸಂದರ್ಭದಲ್ಲಿ ಪ್ರಜ್ವಲ್ ರೇವಣ್ಣನ ಕುರಿತಾಗಿ ಮಾತನಾಡಿದ್ದೆ. ಆತ ನನಗೆ, ನನ್ನ ಕುಟುಂಬಕ್ಕೆ, ನನ್ನ ಸಹೋದ್ಯೋಗಿಗಳಿಗೆ, ಸ್ನೇಹಿತರಿಗೆ ಮತ್ತು ನನ್ನ ಪಕ್ಷದ ಕಾರ್ಯಕರ್ತರಿಗೆ ತಂದೊಡ್ದಿರುವ ಆಘಾತ ಮತ್ತು ನೋವಿನಿಂದ ಹೊರಬಂದು ಮಾತನಾಡಲು ಕೊಂಚ ಸಮಯ ಹಿಡಿಯಿತು ಎಂದು ಹೇಳಿದ್ದಾರೆ.

ನಾನು ಈಗಾಗಲೇ ಸ್ಪಷ್ಟಪಡಿಸಿರುವ ಹಾಗೆ ಕಾನೂನಿನ ಪ್ರಕಾರ ಅವನು ತಪ್ಪಿತಸ್ಥನೆಂದಾದರೆ, ಅವನಿಗೆ ಅತ್ಯಂತ ಕಠಿಣ ಶಿಕ್ಷೆ ವಿಧಿಸಬೇಕು. ನನ್ನ ಈ ನಿಲುವನ್ನು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಪ್ರಕರಣ ಹೊರಬಿದ್ದ ಮೊದಲ ದಿನದಿಂದಲೇ ಪ್ರತಿಪಾದಿಸಿದ್ದಾರೆ ಎಂದು ತಿಳಿಸಿದ್ದಾರೆ.

ಈ ಕೆಲವು ವಾರಗಳಿಂದ ಜನರು ನನ್ನ ಮತ್ತು ನನ್ನ ಕುಟುಂಬದವರ ಕುರಿತಾಗಿ ಅತ್ಯಂತ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ, ನಾನು ಅವರು ಮಾತನಾಡುವುದನ್ನು ನಿಲ್ಲಿಸುವ ಪ್ರಯತ್ನ ಮಾಡುವುದಿಲ್ಲ.

ಪ್ರಜ್ವಲನ ಚಟುವಟಿಕೆಗಳ ಬಗ್ಗೆ ನನಗೆ ಯಾವುದೇ ಮಾಹಿತಿ ಇರಲಿಲ್ಲ ಎಂದು ನಾನು ಅವರಿಗೆ ಮನವರಿಕೆ ಮಾಡಿಕೊಡಲು ಸಾಧ್ಯವಿಲ್ಲ,ಅವನನ್ನು ರಕ್ಷಿಸುವ ಯಾವುದೇ ಇರಾದೆಯೂ ನನಗಿಲ್ಲ,ಅವನ ಈಗಿನ ಚಲನವಲನ ಮತ್ತು ಅವನ ವಿದೇಶಿ ಯಾತ್ರೆಯ ಬಗ್ಗೆ ನನಗೆ ಏನೂ ತಿಳಿದಿಲ್ಲ, ತಿಳಿದಿರಲಿಲ್ಲ ಎಂದು ನಾನು ಜನರಿಗೆ ಅರ್ಥಮಾಡಿಸಲು ಸಾಧ್ಯವಿಲ್ಲ. ನಾನು ನನ್ನ ಆತ್ಮಸಾಕ್ಷಿಗೆ ಮಾತ್ರ ಉತ್ತರಿಸಬಲ್ಲೆ. ನನಗೆ ದೇವರಲ್ಲಿ ನಂಬಿಕೆ ಇದೆ ಮತ್ತು ಆ ದೇವರಿಗೆ ಎಲ್ಲಾ ಸತ್ಯ ತಿಳಿದಿದೆ ಎಂದು ನಾನು ನಂಬಿದ್ದೇನೆ ಎಂದು ದೇವೇಗೌಡರು ತಿಳಿಸಿದ್ದಾರೆ.

ಪ್ರಜ್ವಲನು ಎಲ್ಲಿದ್ದರೂ ಬಂದು, ಪೋಲಿಸರ ಮುಂದೆ ಶರಣಾಗಿ, ವಿಚಾರಣೆಯನ್ನು ಎದುರಿಸಬೇಕು ಎಂದು ಯಾವುದೇ ಮುಲಾಜು, ಮರ್ಜಿಯಿಲ್ಲದೆ ಹೇಳುತ್ತಿದ್ದೇನೆ.
ಇದು ನಾನು ಅವನಿಗೆ ಕೊಡುತ್ತಿರುವ ಎಚ್ಚರಿಕೆ ಎಂದು ಕೂಡ ತಿಳಿಯಬೇಕು ಎಂದಿದ್ದಾರೆ.

ಪ್ರಜ್ವಲ್ ಈ ಎಚ್ಚರಿಕೆಗೆ ಮನ್ನಣೆ ಕೊಡದಿದ್ದಲ್ಲಿ ಅವನು ನನ್ನ ಮತ್ತು ಕುಟುಂಬದವರೆಲ್ಲರ ಕೋಪವನ್ನೂ ಎದುರಿಸಬೇಕಾಗುತ್ತದೆ. ಅವನು ಎಸಗಿದ್ದಾನೆ ಎನ್ನಲಾದ ತಪ್ಪುಗಳನ್ನು ತೀರ್ಮಾನಿಸಲು ಕಾನೂನು ಇದೆ. ಆದರೆ ಈ ಎಚ್ಚರಿಕೆಗೆ ಅವನು ತಲೆಬಾಗದಿದ್ದಲ್ಲಿ, ಅವನು ಮನೆಯವರ ಕಣ್ಣಲ್ಲಿ ಏಕಾಂಗಿಯಾಗುವುದರಲ್ಲಿ ಸಂದೇಹವಿಲ್ಲ. ನನ್ನ ಬಗ್ಗೆ ಅವನಿಗೆ ಏನಾದರೂ ಗೌರವವಿದ್ದಲ್ಲಿ ಅವನು ಕೂಡಲೆ ಹಿಂದಿರುಗಿ ಬರಬೇಕು ಎಂದು ಕಡಕ್ಕಾಗಿ ದೇವೇಗೌಡರು ತಿಳಿಸಿದ್ದಾರೆ.

ನಾನಾಗಲಿ, ನನ್ನ ಕುಟುಂಬದವರಾಗಲಿ ಈ ವಿಚಾರಣೆಯಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ ಎಂದು ಭರವಸೆ ಕೊಡುತ್ತೇನೆ. ಇದರಲ್ಲಿ ಯಾವುದೇ ಭಾವನೆಗೆ ಸಿಲುಕದೆ, ಅವನು ಎಸಗಿದ್ದಾನೆ ಎನ್ನಲಾದ ಕೃತ್ಯಗಳು ಮತ್ತು ತಪ್ಪುಗಳಿಂದ ನೊಂದಿರುವ, ಅನ್ಯಾಯಕ್ಕೆ ಒಳಗಾಗಿರುವ ಎಲ್ಲರಿಗೂ ನ್ಯಾಯ ಸಿಗುವುದಷ್ಟೆ ನನಗೆ ಮುಖ್ಯ. ಜನರ ವಿಶ್ವಾಸವನ್ನು ಮರಳಿ ಪಡೆಯುವುದಷ್ಟೆ ನನ್ನ ಗುರಿ ಎಂದು ಸ್ಪಷ್ಟ ಮಾತುಗಳಲ್ಲಿ ಹೇಳಿದ್ದಾರೆ.


Share this with Friends

Related Post