ಉಗಾರ ಖುರ್ದ: “ವಿದ್ಯಾರ್ಥಿಗಳು ಜೀವನದ ಸವಾಲುಗಳನ್ನು ಎದುರಿಸಲು ಆತ್ಮವಿಶ್ವಾಸವನ್ನು ರೂಢಿಸಿಕೊಳ್ಳಬೇಕು. ಯಾವುದೇ ಕ್ಷೇತ್ರದಲ್ಲಿ ಶಿಕ್ಷಣ ಪಡೆದರೂ ಅದರಲ್ಲಿ ಉನ್ನತ ಸ್ಥಾನಕ್ಕೇರುವ ಛಲ ಹೊಂದಿರಬೇಕು” ಎಂದು ಅಥಣಿ ಉಪವಿಭಾಗದ ಡಿವೈಎಸ್‌ಪಿ ಪ್ರಶಾಂತ ಮುನ್ನೋಳಿ ಅವರು ಕಿವಿಮಾತು ಹೇಳಿದರು.
ಸ್ಥಳೀಯ ಉಗಾರ ಖುರ್ದ ಪಟ್ಟಣದ ಶಿರಗಾಂವಕರ ಶಿಕ್ಷಣ ಸಂಸ್ಥೆಯ ಶ್ರೀ ಹರಿ ವಿದ್ಯಾಲಯದಲ್ಲಿ ಆಯೋಜಿಸಲಾಗಿದ್ದ ಹತ್ತನೇ ತರಗತಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು. ಶಿಕ್ಷಣದ ಹಂತದಲ್ಲಿ ಶಿಸ್ತು ಮತ್ತು ಗುರಿ ಇಟ್ಟುಕೊಂಡರೆ ಯಶಸ್ಸು ಸಾಧ್ಯ ಎಂದು ವಿದ್ಯಾರ್ಥಿಗಳನ್ನು ಹುರಿದುಂಬಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಿರಗಾಂವಕರ ಟ್ರಸ್ಟಿನ ಕಾರ್ಯದರ್ಶಿ ರಾಜೇಂದ್ರ ಬೆಳ್ಳಂಕಿ ಮಾತನಾಡಿ, “ಜೀವನದ ಪ್ರತಿಯೊಂದು ಹಂತದಲ್ಲೂ ಸಾಧನೆ ಮಾಡಲು ಶಿಕ್ಷಣವೇ ಅಡಿಪಾಯ. ಗುಣಮಟ್ಟದ ಶಿಕ್ಷಣ ಪಡೆದವರು ಸರ್ವ ಕ್ಷೇತ್ರಗಳಲ್ಲೂ ಮಿಂಚಲು ಸಾಧ್ಯ” ಎಂದರು.
ಈ ಸಂದರ್ಭದಲ್ಲಿ ಪ್ರಮುಖರಾದ ವಿಜಯಕುಮಾರ ಕಾಗೆ, ಎಸ್.ಬಿ. ಸೂರ್ಯವಂಶಿ, ಅನಿಲ ಕಾಳಿಬೀರೆ, ಎಸ್.ಎ. ಶಿಂಧೆ ಸೇರಿದಂತೆ ಶಾಲೆಯ ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

