ಹುಬ್ಬಳ್ಳಿ: ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳಿಂದ ಅಭಿವೃದ್ಧಿ ಕುಂಠಿತವಾಗಿದೆ ಎಂಬ ಟೀಕೆಗಳನ್ನು ತಳ್ಳಿಹಾಕಿರುವ ಮುಖ್ಯಮಂತ್ರಿಗಳು, ಗ್ಯಾರಂಟಿ ಯೋಜನೆಗಳ ಜೊತೆಜೊತೆಗೇ ರಾಜ್ಯದಲ್ಲಿ ಬೃಹತ್ ಅಭಿವೃದ್ಧಿ ಕಾಮಗಾರಿಗಳು ಪ್ರಗತಿಯಲ್ಲಿವೆ ಎಂದು ಸ್ಪಷ್ಟಪಡಿಸಿದ್ದಾರೆ.
ಇಂದು ಶಿರಗುಪ್ಪಿ ಗ್ರಾಮದಲ್ಲಿ ಜಲ ಸಂಪನ್ಮೂಲ ಇಲಾಖೆ ಹಾಗೂ ಕರ್ನಾಟಕ ನೀರಾವರಿ ನಿಗಮ ನಿಯಮಿತ ಸಹಯೋಗದಲ್ಲಿ ಬೆಣ್ಣೆಹಳ್ಳ ಪ್ರವಾಹ ನಿಯಂತ್ರಣ ಕಾಮಗಾರಿ ಶಂಕು ಸ್ಥಾಪನೆ ಮತ್ತು ನವಲಗುಂದ ವಿಧಾನಸಭಾ ಕ್ಷೇತ್ರದ ವಿವಿಧ ಕಾಮಗಾರಿಗಳ ಉದ್ಘಾಟನಾ, ಭೂಮಿ ಪೂಜೆ ಸಮಾರಂಭವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು,ಕರ್ನಾಟಕದಿಂದ ಕೇಂದ್ರಕ್ಕೆ ವಾರ್ಷಿಕ 4.5 ಲಕ್ಷ ಕೋಟಿ ರೂ. ತೆರಿಗೆ ಸಂದಾಯವಾಗುತ್ತಿದ್ದರೆ, ಪ್ರತಿಯಾಗಿ ರಾಜ್ಯಕ್ಕೆ ಸಿಗುತ್ತಿರುವುದು ಕೇವಲ 60 ಸಾವಿರ ಕೋಟಿ ರೂ. ಮಾತ್ರ. ಈ ಮಿತಿಯ ನಡುವೆಯೂ ವಾರ್ಷಿಕ 54 ಸಾವಿರ ಕೋಟಿ ರೂ.ಗಳನ್ನು ಗ್ಯಾರಂಟಿ ಯೋಜನೆಗಳಿಗೆ ವ್ಯಯಿಸಲಾಗುತ್ತಿದೆ. ಇದರಿಂದ ಪ್ರತಿ ಕುಟುಂಬಕ್ಕೆ ವಾರ್ಷಿಕ ಸುಮಾರು 50 ಸಾವಿರ ರೂ.ಗಳ ನೇರ ಲಾಭವಾಗುತ್ತಿದೆ. ಪ್ರಸ್ತುತ 25 ಸಾವಿರ ಕೋಟಿ ರೂ.ಗಳನ್ನು ನೀರಾವರಿ ಕ್ಷೇತ್ರಕ್ಕೂ ಮೀಸಲಿಡಲಾಗಿದೆ ಎಂದರು.
ನೀರಾವರಿ ಯೋಜನೆಗಳಿಗೆ ಕೇಂದ್ರದ ಅಡ್ಡಗಾಲು:
ಕಳಸಾ ಬಂಡೂರಿ ಯೋಜನೆ: 2018ರಲ್ಲಿ ಸುಪ್ರೀಂ ಕೋರ್ಟ್ ಅನುಮತಿ ನೀಡಿದ್ದರೂ, ಕೇಂದ್ರ ವನ್ಯಜೀವಿ ಮಂಡಳಿಯ ಒಪ್ಪಿಗೆ ಬಾಕಿ ಇದೆ. ಟೆಂಡರ್ ಪ್ರಕ್ರಿಯೆ ಮುಗಿದಿದ್ದು, ಕೇಂದ್ರ ಅನುಮತಿ ನೀಡಿದ ಮರುಕ್ಷಣವೇ ಕಾಮಗಾರಿ ಆರಂಭಿಸಲಾಗುವುದು ಎಂದರು.
ಕೃಷ್ಣಾ ಮೇಲ್ದಂಡೆ (ಹಂತ-3): ಕೇಂದ್ರ ಸರ್ಕಾರ ಗೆಜೆಟ್ ನೋಟಿಫಿಕೇಶನ್ ಮಾಡದ ಕಾರಣ ಈ ಯೋಜನೆ ಸ್ಥಗಿತಗೊಂಡಿದೆ ಎಂದರು.
ಮೇಕೆದಾಟು ಯೋಜನೆ: ತಮಿಳುನಾಡಿನ ಅರ್ಜಿ ವಜಾಗೊಂಡಿದ್ದರೂ, 65 ಟಿಎಂಸಿ ಕುಡಿಯುವ ನೀರಿನ ಈ ಯೋಜನೆಗೆ ಕೇಂದ್ರದ ಸಮ್ಮತಿ ಸಿಗುತ್ತಿಲ್ಲ ಎಂದರು.
ಭದ್ರಾ ಮೇಲ್ದಂಡೆ: ರಾಷ್ಟ್ರೀಯ ಯೋಜನೆಯೆಂದು ಘೋಷಿಸಿ 5,300 ಕೋಟಿ ರೂ. ನೀಡುವುದಾಗಿ ಭರವಸೆ ನೀಡಿದ್ದ ಕೇಂದ್ರ, ಈವರೆಗೆ ನಯಾಪೈಸೆ ಬಿಡುಗಡೆ ಮಾಡಿಲ್ಲ ಎಂದು ಕಿಡಿಕಾರಿದರು.
ಮನರೇಗಾ ರದ್ದು – ಬಡವರ ಹೊಟ್ಟೆಗೆ ಹೊಡೆದ ಕೇಂದ್ರ:
2005ರಿಂದ ಯುವಕರು ಮತ್ತು ಮಹಿಳೆಯರಿಗೆ ಆಸರೆಯಾಗಿದ್ದ ಮನರೇಗಾ ಯೋಜನೆಯನ್ನು ಕೇಂದ್ರ ಸರ್ಕಾರ ಕಳೆದ ಡಿಸೆಂಬರ್ನಲ್ಲಿ ರದ್ದುಗೊಳಿಸಿದೆ. ಉದ್ಯೋಗ ನೀಡುವ ಈ ಯೋಜನೆಯನ್ನು ಮರುಸ್ಥಾಪಿಸಲು ರಾಜ್ಯ ಸರ್ಕಾರ ಹೋರಾಟ ನಡೆಸಲಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.
ಮಾನವೀಯ ಧರ್ಮವೇ ನಮ್ಮ ಪಥ:
“ಇವನಾರವ ಎಂದೆನಿಸದಿರಯ್ಯ, ಇವ ನಮ್ಮವ ಎಂದೆನಿಸಯ್ಯ” ಎಂಬ ಬಸವಣ್ಣನವರ ತತ್ವದಂತೆ ನಾವು ಮನುಷ್ಯ ಧರ್ಮಕ್ಕೆ ಆದ್ಯತೆ ನೀಡಿದ್ದೇವೆ. ಗ್ಯಾರಂಟಿ ಯೋಜನೆಗಳ ಫಲಾನುಭವಿಗಳಲ್ಲಿ ಶೇ. 53ರಷ್ಟು ಮಹಿಳೆಯರಿದ್ದು, ಅದರಲ್ಲಿ ಪರಿಶಿಷ್ಟ ಜಾತಿ (ಶೇ. 17) ಮತ್ತು ಪರಿಶಿಷ್ಟ ಪಂಗಡದ (ಶೇ. 11) ಜನರ ಪಾಲು ದೊಡ್ಡದಿದೆ ಎಂದು ಸಿಎಂ ಅಂಕಿಅಂಶಗಳ ಸಮೇತ ವಿವರಿಸಿದರು
ಇದೇ ವೇಳೆ ನವಲಗುಂದ ವಿಧಾನಸಭಾ ಕ್ಷೇತ್ರವನ್ನು ಸರ್ವತೋಮುಖವಾಗಿ ಅಭಿವೃದ್ಧಿಪಡಿಸಿ, ಒಂದು ಮಾದರಿ ಕ್ಷೇತ್ರವನ್ನಾಗಿ ರೂಪಿಸುವುದು ನಮ್ಮ ಗುರಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಬೆಣ್ಣೆಹಳ್ಳ ಯೋಜನೆ: ಸುಮಾರು 200 ಕೋಟಿ ರೂ. ವೆಚ್ಚದಲ್ಲಿ ಬೆಣ್ಣೆಹಳ್ಳ ಪ್ರವಾಹ ನಿಯಂತ್ರಣ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಈ ಯೋಜನೆಯಿಂದ ಪ್ರವಾಹಕ್ಕೆ ಸಿಲುಕುತ್ತಿದ್ದ 37 ಹಳ್ಳಿಗಳು ಹಾಗೂ 20 ಸಾವಿರ ಹೆಕ್ಟೇರ್ ಕೃಷಿ ಭೂಮಿಗೆ ರಕ್ಷಣೆ ಸಿಗಲಿದೆ ಎಂದರು.
ಕೇಂದ್ರದ ವಿಳಂಬ: ಈ ಹಿಂದೆ 1610 ಕೋಟಿ ರೂ.ಗಳ ಬೃಹತ್ ಯೋಜನಾ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗಿತ್ತು. ಆದರೆ ಕೇಂದ್ರದ ವಿಳಂಬ ಧೋರಣೆಯಿಂದಾಗಿ, ಈಗ ರಾಜ್ಯ ಸರ್ಕಾರವೇ ಮೊದಲ ಹಂತವಾಗಿ 200 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿ ಆರಂಭಿಸಿದೆ ಎಂದರು.
ಅಣ್ಣಿಗೇರಿ ಅಭಿವೃದ್ಧಿ: ಅಣ್ಣಿಗೇರಿ ಪಟ್ಟಣಕ್ಕೆ ಒಳಚರಂಡಿ (UGD) ವ್ಯವಸ್ಥೆ ಕಲ್ಪಿಸುವ ಕುರಿತು ಮುಂಬರುವ ಬಜೆಟ್ನಲ್ಲಿ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದರು.
ಶಾಸಕರ ಕಾರ್ಯವೈಖರಿ: ಶಾಸಕ ಎನ್.ಎಚ್. ಕೋನರಡ್ಡಿ ಅವರ ಪ್ರಾಮಾಣಿಕ ಪ್ರಯತ್ನ ಮತ್ತು ನಿರಂತರ ಒತ್ತಾಸೆಯಿಂದಾಗಿ ಈ ಭಾಗದ ಅಭಿವೃದ್ಧಿ ಕೆಲಸಗಳು ವೇಗ ಪಡೆದುಕೊಂಡಿವೆ ಎಂದು ಸಿಎಂ ಶ್ಲಾಘಿಸಿದರು.
ಒಟ್ಟಾರೆಯಾಗಿ 150 ಕೋಟಿ ರೂ.ಗಳಿಗೂ ಅಧಿಕ ಮೌಲ್ಯದ ವಿವಿಧ ಕಾಮಗಾರಿಗಳ ಉದ್ಘಾಟನೆ ಮತ್ತು ಭೂಮಿ ಪೂಜೆಯನ್ನು ನೆರವೇರಿಸುವ ಮೂಲಕ ಕ್ಷೇತ್ರದ ಪ್ರಗತಿಗೆ ಸರ್ಕಾರ ಬದ್ಧವಾಗಿದೆ ಎಂದು ಸಿದ್ದರಾಮಯ್ಯ ಪುನರುಚ್ಚರಿಸಿದರು.

