ನವದೆಹಲಿ: ಬೆಳಗಾವಿ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ರಸ್ತೆಗಳ ಮೇಲ್ದರ್ಜೆಗೇರಿಸುವಿಕೆ, ಪ್ರಯಾಣಿಕರ ಸುರಕ್ಷತೆ ಮತ್ತು ಸಾರಿಗೆ ಸಂಸ್ಥೆಯ ಆಧುನೀಕರಣಕ್ಕಾಗಿ ಸುಮಾರು ₹170 ಕೋಟಿಗೂ ಅಧಿಕ ಮೊತ್ತದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಅನುಮೋದನೆ ನೀಡುವಂತೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರಿಗೆ ಸಂಸದ ಹಾಗು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಮನವಿ ಸಲ್ಲಿಸಿದರು.
ಬೆಳಗಾವಿ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ರಸ್ತೆ ಮೂಲಸೌಕರ್ಯ ಅಭಿವೃದ್ಧಿ ಹಾಗೂ ಸಾರಿಗೆ ಸುರಕ್ಷತೆಗೆ ಸಂಬಂಧಿಸಿದಂತೆ ಕೇಂದ್ರ ಹೆದ್ದಾರಿ ಮತ್ತು ರಸ್ತೆ ಸಾರಿಗೆ ಸಚಿವ ಶ್ರಿ ನಿತಿನ್ ಗಡ್ಕರಿ ಅವರನ್ನು ನವದೆಹಲಿಯ ನೂತನ ಸಂಸತ್ ಭವನದ ಅವರ ಕಚೇರಿಯಲ್ಲಿ ಭೇಟಿ ಮಾಡಿದ ಶೆಟ್ಟರ್ ಪ್ರಮುಖ ಬೇಡಿಕೆಗಳ ಕುರಿತು ಚರ್ಚಿಸಿದರು.
₹86.40 ಕೋಟಿ ಅನುದಾನದ ಪ್ರಸ್ತಾವನೆ:
ಬೆಳಗಾವಿ ಲೋಕಸಭಾ ವ್ಯಾಪ್ತಿಯಲ್ಲಿ ಸುಮಾರು 80.33 ಕಿ.ಮೀ ಉದ್ದದ ರಸ್ತೆಯನ್ನು ಕೇಂದ್ರ ರಸ್ತೆ ಮೂಲಸೌಕರ್ಯ ನಿಧಿ (CRIF) ಯೋಜನೆಯಡಿ ಅಭಿವೃದ್ಧಿಪಡಿಸಲು ₹86.40 ಕೋಟಿ ಅನುದಾನದ ಅವಶ್ಯಕತೆಯಿದ್ದು, ಈ ಕುರಿತು ಶೀಘ್ರ ಅನುಮೋದನೆ ನೀಡುವಂತೆ ಸಚಿವರಿಗೆ ಮನವಿ ಸಲ್ಲಿಸಿದರು.
ಗೋಕಾಕ-ಧಾರವಾಡ ಚತುಷ್ಪಥ ರಸ್ತೆ:
ಗೋಕಾಕದಿಂದ ಯರಗಟ್ಟಿ, ಸವದತ್ತಿ ಮಾರ್ಗವಾಗಿ ಧಾರವಾಡದವರೆಗಿನ ಈಗಿರುವ ದ್ವಿಪಥ ರಸ್ತೆಯನ್ನು ಚತುಷ್ಪಥವನ್ನಾಗಿ (Four-lane) ಪರಿವರ್ತಿಸುವ ಅಗತ್ಯವನ್ನು ಮನವರಿಕೆ ಮಾಡಿಕೊಡಲಾಯಿತು. ಸವದತ್ತಿ ಶ್ರೀ ರೇಣುಕಾ ಯಲ್ಲಮ್ಮ ದೇವಸ್ಥಾನಕ್ಕೆ ತೆರಳುವ ಏಕೈಕ ಮಾರ್ಗ ಇದಾಗಿದ್ದು, ವಾಹನ ದಟ್ಟಣೆ ಹಾಗೂ ಅಪಘಾತಗಳನ್ನು ತಡೆಯಲು ಈ ಯೋಜನೆ ಅನಿವಾರ್ಯವಾಗಿದೆ ಎಂದು ವಿವರಿಸಿದರು.
ಮಹಿಳಾ ಸುರಕ್ಷತೆ ಮತ್ತು ತಂತ್ರಜ್ಞಾನ:
ವಾಯವ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ಗಳಲ್ಲಿ ವಾಹನ ಟ್ರ್ಯಾಕಿಂಗ್ ವ್ಯವಸ್ಥೆ (VTS) ಅಳವಡಿಸಲು ₹25.39 ಕೋಟಿ ಹಾಗೂ ಮಹಿಳೆಯರ ಸುರಕ್ಷತೆಗಾಗಿ ‘ನಿರ್ಭಯ ನಿಧಿ’ ಅಡಿಯಲ್ಲಿ 1000 ಬಸ್ಗಳು ಮತ್ತು ಡಿಪೋಗಳಲ್ಲಿ ಸಿಸಿಟಿವಿ ಕ್ಯಾಮರಾ ಅಳವಡಿಸಲು ₹59.13 ಕೋಟಿ ಅನುದಾನದ ಪ್ರಸ್ತಾವನೆಗಳಿಗೆ ಶೀಘ್ರ ಅನುಮೋದನೆ ನೀಡುವಂತೆ ಕೋರಿದರು.ಈ ಎಲ್ಲಾ ಪ್ರಸ್ತಾವನೆಗಳನ್ನು ಸಕಾರಾತ್ಮಕವಾಗಿ ಆಲಿಸಿದ ಸಚಿವ ನಿತಿನ್ ಗಡ್ಕರಿ ಅವರು, ಶೀಘ್ರದಲ್ಲೇ ಅಗತ್ಯ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.

