ಬೆಳಗಾವಿ ಸುವರ್ಣ ವಿಧಾನಸೌಧ ಡಿ: ರಾಜ್ಯದ ಎಲ್ಲಾ ನಗರಗಳಲ್ಲಿ ನದಿ ಮೂಲಗಳು ಕಲುಷಿತಗೊಳ್ಳದಂತೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ನಿಗಧಿಪಡಿಸಿರುವ ಅಗತ್ಯ ಬಫರ್ ಅನ್ನು ಕಾಯ್ದಿರಿಸಿ ಬಡಾವಣೆಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ನಗರಾಭಿವೃದ್ಧಿ ಹಾಗೂ ನಗರ ಯೋಜನೆ ಸಚಿವ ಬಿ.ಎಸ್. ಸುರೇಶ್ ತಿಳಿಸಿದರು.
ವಿಧಾನ ಪರಿಷತ್ ನಲ್ಲಿ ಸದಸ್ಯ ಶಿವಕುಮಾರ್ ಕೆ, ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿ ಮಾತನಾಡಿದ ಅವರು,10 ಎಕರೆಗೂ ಮೇಲ್ಪಟ್ಟ ಬಡಾವಣೆಗಳನ್ನು ಅಭಿವೃದ್ಧಿಪಡಿಸುವಾಗ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ರವರಿಂದ ಎಸ್.ಟಿ.ಪಿ ಯನ್ನು ಕಡ್ಡಾಯವಾಗಿ ಅಳವಡಿಸುವ ನಿಬಂಧನೆಯಿದ್ದು, ಅದರಂತೆ 10 ಎಕರೆಗಿಂತ ಮೇಲ್ಪಟ್ಟ ಎಲ್ಲಾ ಬಡಾವಣೆಗಳಲ್ಲಿ ಎಸ್.ಟಿ.ಪಿ ಸ್ಥಳಗಳನ್ನು ಗುರುತಿಸಿ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ರವರ ಮಾರ್ಗಸೂಚಿಗಳನುಸಾರ ಅಭಿವೃದ್ಧಿಪಡಿಸಲಾಗುತ್ತಿದೆ ಎಂದರು.
ನಗರಾಭಿವೃದ್ಧಿ ಪ್ರಾಧಿಕಾರದಿಂದ ರಚಿಸಲಾಗುವ ಬಡಾವಣೆಗಳಲ್ಲಿನ ನಿವೇಶನಗಳನ್ನು ಕರ್ನಾಟಕ ನಗರಾಭಿವೃದ್ಧಿ ಪ್ರಾಧಿಕಾರಗಳ (ನಿವೇಶನಗಳ ಹಂಚಿಕೆ) ನಿಯಮಗಳು, 1991 ರಲ್ಲಿನ ಅವಕಾಶಗಳಂತೆ ಸಾರ್ವಜನಿಕರಿಗೆ ಹಂಚಿಕೆ ಮಾಡಲಾಗುತ್ತಿದೆ ಎಂದು ತಿಳಿಸಿದರು.
ರಾಜ್ಯದಲ್ಲಿನ ನಗರಾಭಿವೃದ್ಧಿ ಪ್ರಾಧಿಕಾರಗಳು ಅಭಿವೃದ್ಧಿ ಯೋಜನೆಗಳಿಗೆ ಬೇಕಾಗುವ ಭೂಮಿಯನ್ನು ಭೂಸ್ವಾಧೀನಪಡಿಸಿಕೊಳ್ಳುವ ಕ್ರಮದೊಂದಿಗೆ, ರೈತರ ಸಹಭಾಗಿತ್ವದೊಂದಿಗೆ ಕರ್ನಾಟಕ ನಗರಾಭಿವೃದ್ಧಿ , ಪ್ರಾಧಿಕಾರಗಳ (ಭೂಸ್ವಾಧೀನಪಡಿಸಿಕೊಂಡಿರುವುದಕ್ಕೆ ಪರಿಹಾರಗಳ ಬದಲಿಗೆ ನಿವೇಶನಗಳ ಹಂಚಿಕೆ) ನಿಯಮಗಳು, 2009 ರಲ್ಲಿನ ಅವಕಾಶದಂತೆ ವ್ಯಾಪಕವಾಗಿ ಶೇ. 50:50 ರ ಅನುಪಾತದಡಿಯಲ್ಲಿ ಬಡಾವಣೆ ನಿರ್ಮಿಸಲು ಕ್ರಮವಹಿಸುತ್ತಿವೆ ಎಂದರು.
ಕರಾವಳಿ ಜಿಲ್ಲೆಗಳಿಗೆ ಏಕ, ಬಹು ನಿವೇಶನ ವಿನ್ಯಾಸ ಅನುಮೋದನೆಗೆ ವಿಶೇಷ ಸೇವೆ:
ಕರಾವಳಿ ಜಿಲ್ಲೆಗಳಿಗೆ ಏಕ, ಬಹು ನಿವೇಶನ ವಿನ್ಯಾಸ ಅನುಮೋದನೆಗೆ ವಿಶೇಷ ಸೇವೆ ಕಲ್ಪಿಸಲು ಸೆಂಟರ್ ಫಾರ್ ಇ ಗವರ್ನೆನ್ಸ್ ವತಿಯಿಂದ ಯೂನಿಫೈಡ್ ಲ್ಯಾಂಡ್ ಮ್ಯಾನೇಜ್ಮೆಂಟ್ ಸಿಸ್ಟಮ್ ತಂತ್ರಾಂಶ ವನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ ಎಂದು ನಗರಾಭಿವೃದ್ಧಿ ಹಾಗೂ ನಗರ ಯೋಜನೆ ಸಚಿವ ಬಿ. ಎಸ್. ಸುರೇಶ್ ತಿಳಿಸಿದರು.
ವಿಧಾನ ಪರಿಷತ್ ನಲ್ಲಿ ಸದಸ್ಯ ಮಂಜುನಾಥ ಭಂಡಾರಿ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿ ಮಾತನಾಡಿದ ಅವರು,ರಾಜ್ಯದ ಇತರೆ ಜಿಲ್ಲೆಗಳಿಗಿಂತ ಕರಾವಳಿ ಜಿಲ್ಲೆಗಳು ಭೌಗೋಳಿಕವಾಗಿ ಭಿನ್ನವಾಗಿರುವುದರಿಂದ ಈ ಜಿಲ್ಲೆಗಳಿಗೆ ಅನ್ವಯವಾಗುವಂತೆ ಏಕ/ಬಹು ನಿವೇಶನ ವಿನ್ಯಾಸ ಅನುಮೋದನೆ ನೀಡುವ ಕುರಿತು ವಿಶೇಷ ಸೇವೆಗಳನ್ನು ಕಲ್ಪಿಸಲಾಗಿದೆ.ಕರಾವಳಿ ಜಿಲ್ಲೆಗಳಲ್ಲಿ ಸ್ಥಳೀಯ ಯೋಜನಾ ಪ್ರದೇಶದ ವ್ಯಾಪ್ತಿಗೆ ಒಳಪಡದೇ ಇರುವ ಗ್ರಾಮ ಪಂಚಾಯತಿಯಲ್ಲಿನ ಒಂದು ಎಕರೆ ಒಳಗಿನ ಜಮೀನುಗಳಿಗೆ ಅನುಮೋದನೆ ನೀಡುವ ಪ್ರಕರಣಗಳಿಗೆ ತಾಂತ್ರಿಕ ಅನುಮೋದನೆ ನೀಡಲು ಸಹಾಯಕ ನಿರ್ದೇಶಕರ ಕಛೇರಿ ಹಾಗೂ ಹತ್ತಿರದ ಯೋಜನಾ ಪ್ರಾಧಿಕಾರಗಳ ನಗರ ಮತ್ತು ಗ್ರಾಮಾಂತರ ಯೋಜನಾ ಇಲಾಖೆಯ ಅಧಿಕಾರಿಗಳಿಗೆ ಅಧಿಕಾರ ಪ್ರತ್ಯಾಯೋಜಿಸಿ, ತಾಲ್ಲೂಕು ಪಂಚಾಯತಿ ಕಛೇರಿಯಲ್ಲಿಯೇ ನಗರ ಮತ್ತು ಗ್ರಾಮಾಂತರ ಯೋಜನಾ ಇಲಾಖೆಯ ಅಧಿಕಾರಿಗಳು ಕಾರ್ಯ ನಿರ್ವಹಿಸಲು ಆದೇಶಿಸಲಾಗಿದೆಎಂದರು.
ಕರಾವಳಿ ಜಿಲ್ಲೆ ಒಳಗೊಂಡಂತೆ ಇಡೀ ರಾಜ್ಯಕ್ಕೆ ಅನ್ವಯವಾಗುವಂತೆ ಏಕ/ಬಹು ನಿವೇಶನ ವಿನ್ಯಾಸ ಅನುಮೋದನೆ ನೀಡುವ ಕುರಿತ ನಿಯಮ ಗಳನ್ನು ಸಮನ್ವಯಗೊಳಿಸಲು ಮತ್ತು ವಿನ್ಯಾಸ ಅನುಮೋದನೆ ಯನ್ನು ಪಾರದರ್ಶಕತೆ ಹಾಗೂ ಜನ ಸ್ನೇಹಿಯಾಗಿಸಲು ಅನುಕೂಲವಾಗುವಂತೆ ಸೆಂಟರ್ ಫಾರ್ ಇ ಗವರ್ನೆನ್ಸ್ ವತಿಯಿಂದ ಯೂನಿಫೈಡ್ ಲ್ಯಾಂಡ್ ಮ್ಯಾನೇಜ್ಮೆಂಟ್ ಸಿಸ್ಟಮ್ ತಂತ್ರಾಂಶ ವನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ ಎಂದರು.
ಬೀದರ ಸಹಕಾರಿ ಸಕ್ಕರೆ ಕಾರ್ಖಾನೆಯ ಪುನಶ್ವೇತನಕ್ಕೆ ಕ್ರಮ:
ಹುಮನಾಬಾದ್ ತಾಲೂಕಿನ ಹಳ್ಳಿಖೇಡ್ ಹತ್ತಿರದ ಬೀದರ ಸಹಕಾರಿ ಸಕ್ಕರೆ ಕಾರ್ಖಾನೆಯ ಪುನಶ್ವೇತನಕ್ಕೆ ಸರ್ಕಾರವು ಕ್ರಮವಹಿಸಲಿದೆ ಎಂದು ಜವಳಿ, ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವರಾದ ಶಿವಾನಂದ ಎಸ್ ಪಾಟೀಲ ಹೇಳಿದರು.
ವಿಧಾನ ಪರಿಷತ್ ಸದಸ್ಯರಾದ ಭೀಮರಾಯ ಬಸವರಾಜ ಪಾಟೀಲ ಅವರ ಚುಕ್ಕೆ ಗುರುತಿನ ಪ್ರಶ್ನೆ ಸಂಖ್ಯೆ 299ರ ಮೇಲಿನ ಚರ್ಚೆಯಲ್ಲಿ ಮಾತನಾಡಿದ ಸಚಿವರು, ಈ ಕಾರ್ಖಾನೆಯ ಪುನಶ್ಚೇತನದ ಪ್ರಕ್ರಿಯೆಯು 2022ರಿಂದಲೇ ಆರಂಭವಾಗಿದೆ. 2022-23ನೇ ಹಂಗಾಮಿನಿಂದ 40 ವರ್ಷಗಳ ಅವಧಿಗೆ ಎಲ್.ಆರ್.ಓ.ಟಿ. ಆಧಾರದ ಮೇಲೆ ಇದ್ದಲ್ಲಿ, ಯಥಾಸ್ಥಿತಿಯಲ್ಲಿ ಖಾಸಗಿ ಅವರಿಗೆ ಗುತ್ತಿಗೆ ನೀಡಲು 2023ರಲ್ಲಿ ದಿನಪತ್ರಿಕೆಯಲ್ಲಿ ಟೆಂಡರ್ ಕರೆದರೂ ಸಹ ಬಿಡ್ಡುದಾರರು ಆಸಕ್ತಿ ತೋರಲಿಲ್ಲ. ಎರಡನೇ ಬಾರಿಗೆ ಟೆಂಡರ್ ಕರೆದರು ಸಹ ಯಾರೊಬ್ಬ ಬಿಡ್ಡುದಾರರು ಟೆಂಡರ್ ಪ್ರಕ್ರಿಯೆಯಲ್ಲಿ ಭಾಗಿಯಾಗಲಿಲ್ಲ.ಬೀದರ ಸಹಕಾರಿ ಸಕ್ಕರೆ ಕಾರ್ಖಾನೆಯನ್ನು ಪುನಶ್ಚೇತನಗೊಳಿಸುವ ಪ್ರಸ್ತಾವನೆಯನ್ನು ಒಳಗೊಂಡಂತೆ ಒಟ್ಟು 06 ಸಹಕಾರಿ ಸಕ್ಕರೆ ಕಾರ್ಖಾನೆಗಳಿಗೆ ಎನ್.ಸಿ.ಡಿ.ಸಿ.ಯಿಂದ ನೆರವನ್ನು ಪಡೆಯುವ ಕುರಿತು ಆರ್ಥಿಕ ಇಲಾಖೆಯೊಂದಿಗೆ ಸಮಾಲೋಚನೆಯನ್ನು ನಡೆಸಲಾಗುವುದು. ಎನ್.ಸಿ.ಡಿ.ಸಿ.ಯಿಂದ ಆರ್ಥಿಕ ನೆರವು ಲಭ್ಯವಾಗದಿದ್ದಲ್ಲಿ ಬೀದರ ಸಹಕಾರಿ ಸಕ್ಕರೆ ಕಾರ್ಖಾನೆಯನ್ನು ಎಲ್.ಆರ್.ಓ.ಟಿ. ಆಧಾರದ ಮೇಲೆ ಇದ್ದಲ್ಲಿ ಯಥಾಸ್ಥಿತಿಯಲ್ಲಿ ಖಾಸಗಿಯವರಿಗೆ ದೀರ್ಘಾವಧಿಗೆ ಗುತ್ತಿಗೆ ನೀಡಲು ಮತ್ತೊಮ್ಮೆ ಟೆಂಡರ್ ಪ್ರಕಟಣೆಯನ್ನು ಹೊರಡಿಸಲು ಪರಿಶೀಲಿಸಲಾಗುವುದು ಎಂದು ತಿಳಿಸಿದರು.
ಇದು ಬೀದರ ಜಿಲ್ಲೆಯ ಮೊದಲ ಕಾರ್ಖಾನೆಯಾಗಿದೆ. 25 ಸಾವಿರ ರೈತರು ಷೇರು ಹೊಂದಿದ್ದಾರೆ. ಈ ಕಾರ್ಖಾನೆ ಮುಚ್ಚಿದರೆ ಬೀದರ ಭಾಗದ ರೈತರಿಗೆ ಅನ್ಯಾಯವಾಗಲಿದೆ. ದಯಮಾಡಿ ಯಾರಿಗಾದರು ಗುತ್ತಿಗೆ ನೀಡಿಯಾದರೂ ಕಾರ್ಖಾನೆಯನ್ನು ಆರಂಭಿಸಬೇಕು ಎಂದು ಪರಿಷತ್ ಶಾಸಕರಾದ ಭೀಮರಾವ್ ಪಾಟೀಲ ಅವರು ಸರ್ಕಾರಕ್ಕೆ ಒತ್ತಾಯ ಮಾಡಿದರು.

