Fri. Mar 6th, 2026

ಧರ್ಮಸ್ಥಳ ಪ್ರಕರಣ; ಸೌಜನ್ಯಾ ತಾಯಿಯಿಂದ ಹೈಕೋರ್ಟ್‌ಗೆ ಪಿಐಎಲ್

Share this with Friends

ಬೆಂಗಳೂರು: ಧರ್ಮಸ್ಥಳದಲ್ಲಿ 2012ರಲ್ಲಿ ಸಾಮೂಹಿಕ ಅತ್ಯಾಚಾರಕ್ಕೀಡಾಗಿ ಕೊಲೆಯಾದ ವಿದ್ಯಾರ್ಥಿನಿ ಸೌಜನ್ಯಾ ಅವರ ತಾಯಿ ಕುಸುಮವತಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.ಅಸಹಜ ಸಾವು ಪ್ರಕರಣಗಳಲ್ಲಿ ಹೂತುಹಾಕಲಾಗಿರುವ ಎಲ್ಲ 74 ಅನಾಥ ಶವಗಳಿಗೆ ಸಂಬಂಧಿಸಿದಂತೆ ಪ್ರತ್ಯೇಕ ಎಫ್ಐಆರ್ ದಾಖಲಿಸಲು ನಿರ್ದೇಶನ ನೀಡುವಂತೆ ಪಿಐಎಲ್ ಸಲ್ಲಿಕೆ ಮಾಡಿದ್ದಾರೆ.

ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ ಪ್ರಕರಣದ ತನಿಖೆ ನಡೆಸುತ್ತಿರುವ ಎಸ್‌ಐಟಿಯನ್ನು ಪ್ರತಿವಾದಿಯನ್ನಾಗಿಸಲಾಗಿದ್ದು,ಅರ್ಜಿಯು ಇನ್ನಷ್ಟೇ ಹೈಕೋರ್ಟ್ ವಿಭಾಗೀಯ ನ್ಯಾಯಪೀಠದ ಮುಂದೆ ವಿಚಾರಣೆಗೆ ನಿಗದಿಯಾಗಬೇಕಿದೆ.ನ್ಯಾಯಾಂಗದ ಮೇಲ್ವಿಚಾರಣೆಯಲ್ಲಿ ತನಿಖೆ ನಡೆದರೆ ತನಿಖೆಯಲ್ಲಿ ಲೋಪಗಳಾಗದಂತೆ ಹಾಗೂ ಮತ್ತೆ ತನಿಖೆ ಹಳಿತಪ್ಪದಂತೆ ನೋಡಿಕೊಳ್ಳಬಹುದಾಗಿದ್ದು, ಇದಕ್ಕಾಗಿ ನ್ಯಾಯಾಲಯದ ಮಧ್ಯಪ್ರವೇಶ ಅಗತ್ಯವಾಗಿದೆ ಎಂದು ಪಿಐಎಲ್‌ನಲ್ಲಿ ವಿವರಿಸಲಾಗಿದೆ.

ಮನವಿ ಏನು?

ಎಲ್ಲ 74 ಅಸಹಜ ಸಾವು ಪ್ರಕರಣಗಳಿಗೆ ಸಂಬಂಧಿಸಿದಂತೆ ಪ್ರತ್ಯೇಕ ಎಫ್ಐಆರ್ ದಾಖಲಿಸಲು ಪ್ರತಿವಾದಿ ಎಸ್‌ಐಟಿಗೆ ನಿರ್ದೇಶಿಸಬೇಕು. ಪ್ರತಿ ನಿರ್ದಿಷ್ಟ ಪ್ರಕರಣದ ತನಿಖೆಗೂ ವೈಯಕ್ತಿಕ ಜವಾಬ್ದಾರಿ ಹೊಂದಿರುವ ತನಿಖಾಧಿಕಾರಿಯನ್ನು ನಿಯೋಜಿಸಲು ಆದೇಶಿಸಬೇಕು.ರೇಡಾರ್‌ನಂತಹ ಸಾಧನಗಳನ್ನು ಬಳಸಿ ಸಮಾಧಿ ಸ್ಥಳವನ್ನು ಪತ್ತೆಹಚ್ಚಿ, ವಿಧಿವಿಜ್ಞಾನ ಪರೀಕ್ಷೆಗಾಗಿ ಅವಶೇಷಗಳನ್ನು ಹೊರತೆಗೆಯುವಂತೆ ಹಾಗೂ ಡಿಎನ್‌ಎ, ದೈಹಿಕ ಚಹರೆ, ಕಾಣೆಯಾದ ವ್ಯಕ್ತಿಗಳ ವರದಿಗಳೊಂದಿಗೆ ಹೊಂದಾಣಿಕೆ ಮಾಡಿ ಸಂತ್ರಸ್ತರನ್ನು ಪತ್ತೆ ಹಚ್ಚಲು, ವಿಧಿವಿಜ್ಞಾನ ರೋಗಶಾಸ್ತ್ರದ ಮೂಲಕ ಅವರ ಸಾವಿಗೆ ನಿಖರ ಕಾರಣವನ್ನು ನಿರ್ಧರಿಸಲು, ಸಾಕ್ಷಿಗಳನ್ನು ಗುರುತಿಸಿ ಅವರ ಹೇಳಿಕೆಗಳನ್ನು ದಾಖಲಿಸಲು ಹಾಗೂ ಅಪರಾಧಿಗಳನ್ನು ಗುರುತಿಸಿ, ವಿಚಾರಣೆಗೆ ಒಳಪಡಿಸಲು ಎಸ್‌ಐಟಿಗೆ ನಿರ್ದೇಶಿಸಬೇಕು ಎಂದು ಮನವಿ ಮಾಡಲಾಗಿದೆ.

ಎಲ್ಲ 74 ಪ್ರಕರಣಗಳ ವಿವರಗಳನ್ನು ವ್ಯಾಪಕವಾಗಿ ವಿತರಣೆಯಾಗುವ ಕನಿಷ್ಠ ಮೂರು ಪತ್ರಿಕೆಗಳಲ್ಲಿ (ಕನ್ನಡ, ಇಂಗ್ಲಿಷ್‌) ಹಾಗೂ ಸಾರ್ವಜನಿಕ ವೆಬ್‌ಸೈಟ್‌ನಲ್ಲಿ ಪ್ರಕಟಿಸಲು ಆದೇಶಿಸಬೇಕು.ಸಾರ್ವಜನಿಕ ಪ್ರಕಟಣೆಯಲ್ಲಿ ಕಾಣೆಯಾದ ವ್ಯಕ್ತಿಗಳ ಸಂಬಂಧಿಕರು ಸೂಕ್ತ ಮಾಹಿತಿಯೊಂದಿಗೆ ಎಸ್‌ಐಟಿಯನ್ನು ಸಂಪರ್ಕಿಸಲು ಸ್ಪಷ್ಟ ಸೂಚನೆ ನೀಡಲು ಹಾಗೂ ನಿಯೋಜಿತ ಅಧಿಕಾರಿಗಳ ಸಂಪರ್ಕ ವಿವರಗಳನ್ನು ಒದಗಿಸುವಂತೆ ನಿರ್ದೇಶಿಸಬೇಕು. ಪ್ರಕರಣಕ್ಕೆ ಸಂಬಂಧಿಸಿದ ಸಮಗ್ರ ವಸ್ತುಸ್ಥಿತಿ ವರದಿಯನ್ನು ತಿಂಗಳಿಗೊಮ್ಮೆ ನ್ಯಾಯಾಲಯಕ್ಕೆ ಸಲ್ಲಿಸುವಂತೆ ಎಸ್‌ಐಟಿಗೆ ನಿರ್ದೇಶಿಸಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.


Share this with Friends

Related Post