Fri. Mar 6th, 2026

ರಾಹುಲ್ ಗಾಂಧಿ ಜತೆ ರಾಜಕೀಯ ಚರ್ಚೆ ಮಾಡಿಲ್ಲ: ಸಿಎಂ

Share this with Friends

ಮೈಸೂರು:ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಜತೆ ರಾಜ್ಯ ರಾಜಕೀಯ ವಿಚಾರದ ಕುರಿತು ಯಾವುದೇ ಚರ್ಚೆ ನಡೆಸಿಲ್ಲ, ಅಧಿಕಾರ ಹಂಚಿಕೆ ವಿಚಾರದಲ್ಲಿ ಅಂತಿಮವಾಗಿ ಪಕ್ಷದ ವರಿಷ್ಠರ ತೀರ್ಮಾನದಂತೆ ನಡೆದುಕೊಳ್ಳುತ್ತೇವೆ ಈ ವಿಚಾರದಲ್ಲಿ ನಾನು ಹಾಗು ಡಿಕೆ ಶಿವಕುಮಾರ್ ಮಾತ್ರ ಮಾತನಾಡಬೇಕು ಶಾಸಕರ ಹೇಳಿಕೆಗಳಿಗೆ ಮಹತ್ವ ಕೊಡಬೇಕಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.

ಮೈಸೂರು ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು,ರಾಹುಲ್ ಗಾಂಧಿಯವರು ಗೂಡ್ಲೂರಿಗೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಹೋಗುತ್ತಿದ್ದು ಮಾರ್ಗ ಮಧ್ಯೆ ರಾಜ್ಯದಲ್ಲಿ ಬಂದಿಳಿದ ಕಾರಣ ಅವರನ್ನು ಸೌಹಾರ್ಧಯುತವಾಗಿ ಭೇಟಿ ಮಾಡಿದ್ದೇವೆ ಈ ಭೇಟಿ ವೇಳೆ ರಾಹುಲ್ ಗಾಂಧಿ ಅವರೊಂದಿಗೆ ಯಾವುದೇ ರಾಜಕೀಯ ಚರ್ಚೆ ನಡೆದಿಲ್ಲ ಎಂದು ತಿಳಿಸಿದರು. ಅಲ್ಲದೆ ಸಂಜೆ ದೆಹಲಿಗೆ ತೆರಳುವಾಗಲೂ ಭೇಟಿಯಾಗಿ ಬೀಳ್ಕೊಡಲಾಗುವುದು ಎಂದರು.

ಪಕ್ಷದಲ್ಲಿ ಅಧಿಕಾರ ಹಂಚಿಕೆಯ ಬಗ್ಗೆ  ಯಾವುದೇ ಗೊಂದಲವಿಲ್ಲ. ಇದೆಲ್ಲ ಮಾಧ್ಯಮಗಳ ಸೃಷ್ಟಿ. ಪಕ್ಷದ ಶಾಸಕರೇ ಈ ಬಗ್ಗೆ ಮಾತನಾಡುತ್ತಿರುವ ಬಗ್ಗೆ ನನಗೆ ತಿಳಿದಿಲ್ಲ ಆದರೆ ನಾನು ಅಥವಾ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಮಾತ್ರ ಈ ವಿಚಾರದಲ್ಲಿ ಮಾತನಾಡಬೇಕು.ಅಧಿಕಾರ ಹಂಚಿಕೆ ವಿಚಾರದಲ್ಲಿ ಅಂತಿಮವಾಗಿ ಪಕ್ಷದ ವರಿಷ್ಠರ ತೀರ್ಮಾನದಂತೆ ನಡೆದುಕೊಳ್ಳಲಾಗುವುದು ಎಂದರು.

ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಸರ್ಕಾರ ಸಿದ್ಧ:

ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸಲು ರಾಜ್ಯ ಸರ್ಕಾರ ಸಂಪೂರ್ಣವಾಗಿ ಸಿದ್ಧವಿದೆ. ಬಿಜೆಪಿ ಜೆಡಿಎಸ್ ನಿಂದ ಪಾಲಿಕೆ ಚುನಾವಣೆಗಳಲ್ಲಿ ಯಾವುದೇ ಪರಿಣಾಮ ಉಂಟಾಗುವುದಿಲ್ಲ ಎಂದು ಮುಖ್ಯಮಂತ್ರಿಗಳು ವಿಶ್ವಾಸ ವ್ಯಕ್ತಪಡಿಸಿದರು.

ಮಾರ್ಚ್ ಮೊದಲ ವಾರದಲ್ಲಿ ಬಜೆಟ್:

ಬಹುತೇಕ ಮಾರ್ಚ್ ಮೊದಲ ವಾರದಲ್ಲಿ ಬಜೆಟ್ ಮಂಡಿಸಲಾಗುವುದು ಎಂದು ಮುಖ್ಯಮಂತ್ರಿಗಳು ಇದೇ ಸಂದರ್ಭದಲ್ಲಿ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದರು.

ಫೆಬ್ರವರಿ 13ರಂದು ಹಾವೇರಿಯಲ್ಲಿ ಸಾಧನಾ ಸಮಾವೇಶ ನಡೆಸುವ ಬಗ್ಗೆ ಚಿಂತನೆ:

ಮುಖ್ಯಮಂತ್ರಿಯಾಗಿ ಸಾವಿರ ದಿನಗಳನ್ನು ಪೂರೈಸಿರುವ ಹಿನ್ನೆಲೆಯಲ್ಲಿ ಫೆಬ್ರವರಿ 13ರಂದು ಹಾವೇರಿಯಲ್ಲಿ ಸಾಧನಾ ಸಮಾವೇಶವನ್ನು ಆಯೋಜಿಸುವ ಬಗ್ಗೆ ಚಿಂತನೆ ನಡೆಸಲಾಗಿದೆ ಎಂದು ಮುಖ್ಯಮಂತ್ರಿಗಳು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.

ಎಚ್. ಡಿ.ಕುಮಾರಸ್ವಾಮಿ ವರ್ತನೆಯನ್ನು ಗಮನಿಸುವುದಿಲ್ಲ:

ಕೇಂದ್ರ ಸಚಿವ ಎಚ್. ಡಿ ಕುಮಾರಸ್ವಾಮಿ ಅವರು ರಾಜ ರಾಜಕಾರಣಕ್ಕೆ ಮರಳುವ ಬಗ್ಗೆ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿಗಳು ಈಗ ಆರೋಗ್ಯದಲ್ಲಿ ಚೇತರಿಕೆಯಾಗಿದ್ದು , ಕ್ರಿಯಾಶೀಲರಾಗಿದ್ದಾರೆ. ಅವರ ವರ್ತನೆ,  ಹಾವಭಾವ ಇವುಗಳನ್ನು ಮಾಧ್ಯಮಗಳೇ ಗಮನಿಸಬೇಕು ನಾವು ಗಮನಿಸುವುದಿಲ್ಲ ಎಂದರು.


Share this with Friends

Related Post