ಬೆಂಗಳೂರು:ಡಿಜಿಟಲ್ ಇ– ಸ್ಟ್ಯಾಂಪ್ ವ್ಯವಸ್ಥೆಯನ್ನು ಪ್ರಾಯೋಗಿಕವಾಗಿ ಜಾರಿಗೊಳಿಸಲಾಗಿದ್ದು ಸಧ್ಯದಲ್ಲೇ ಇ-ಸ್ಟ್ಯಾಂಪ್ ಬದಲು ಡಿಜಿಟಲ್ ಇ– ಸ್ಟ್ಯಾಂಪ್ ವ್ಯವಸ್ಥೆಯನ್ನು ಕಡ್ಡಾಯಗೊಳಿಸಲಾಗುತ್ತದೆ ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ನೋಂದಣಿ ಮತ್ತು ನೋಂದಣಿಯೇತರ ಛಾಪಾ ಕಾಗದ ವಹಿವಾಟುಗಳಿಗೆ ಬಳಸುವ ‘ಇ– ಸ್ಟ್ಯಾಂಪ್’ ಬದಲಿಗೆ ‘ಡಿಜಿಟಲ್ ಇ– ಸ್ಟ್ಯಾಂಪ್’ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ. ಸ್ಟ್ಯಾಂಪ್ ವಂಚನೆ ಮತ್ತು ಭದ್ರತಾ ಲೋಪವನ್ನು ಸಂಪೂರ್ಣ ತೊಡೆದು ಹಾಕಲು ಈ ಹೊಸ ವ್ಯವಸ್ಥೆ ಪರಿಚಯಿಸಲಾಗಿದೆ, ಸಧ್ಯ ಜನರಲ್ಲಿ ಜಾಗೃತಿ ಮೂಡಲಿ ಎನ್ನುವ ಕಾರಣಕ್ಕೆ ಇ-ಸ್ಟ್ಯಾಂಪ್, ಡಿಜಿಟಲ್ ಇ-ಸ್ಟ್ಯಾಂಪ್ ಎರಡಕ್ಕೂ ಅವಕಾಶ ನೀಡಲಾಗಿದೆ ಆದರೆ ಮುಂದಿನ ದಿನಗಳಲ್ಲಿ ‘ಡಿಜಿಟಲ್ ಇ-ಸ್ಟ್ಯಾಂಪ್’ ಕಡ್ಡಾಯಗೊಳಿಸಲಾಗುವುದು ಎಂದು ತಿಳಿಸಿದ್ದಾರೆ.
ನಾಗರಿಕರು ಮಧ್ಯವರ್ತಿಗಳ ನೆರವಿಲ್ಲದೆ, ಮನೆಯಲ್ಲಿಯೇ ಕುಳಿತು ‘ಡಿಜಿಟಲ್ ಇ– ಸ್ಟ್ಯಾಂಪ್’ ತಯಾರಿಸಿಕೊಳ್ಳಬಹುದು. ಇಂಟರ್‌ನೆಟ್ ಇದ್ದರೆ 24×7 ಜಗತ್ತಿನಲ್ಲಿ ಎಲ್ಲಿಯೇ ಕುಳಿತು ಈ ಸೇವೆಯನ್ನು ಪಡೆಯಬಹುದು. ಎಲ್ಲ ಸೇವೆಗಳು ಸಂಪೂರ್ಣ ಡಿಜಿಟಲ್ ಆಗಿರಲಿದೆ. ಸುರಕ್ಷಿತ ಮತ್ತು ವೇಗವಾಗಿ ಆನ್‌ಲೈನ್ ಪಾವತಿ ಮಾಡಲು ಕೂಡಾ ಅವಕಾಶವಿದೆ ಎಂದು ಮಾಹಿತಿ ನೀಡಿದ್ದಾರೆ.

