Sat. Nov 2nd, 2024

ಗ್ರಾಮೀಣ ಭಾಗದ ಮಕ್ಕಳಿಗೂ ಡಿಜಿಟಲ್ ಶಿಕ್ಷಣ : ಜಿಲ್ಲಾಧಿಕಾರಿ ಶಿಲ್ಪಾ ನಾಗ್

Share this with Friends

ಚಾಮರಾಜನಗರ, ಮಾ.19:ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳಲ್ಲಿಯೂ
ಡಿಜಿಟಲ್ ಶಿಕ್ಷಣವನ್ನು ನೀಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಶಿಲ್ಪಾ ನಾಗ್ ತಿಳಿಸಿದರು.

ತಾಂತ್ರಿಕತೆಯಿಂದ ಕೂಡಿರುವ ಡಿಜಿಟಲ್ ಶಿಕ್ಷಣ ನಗರ ಪ್ರದೇಶದ ಮಕ್ಕಳಿಗೆ ಮಾತ್ರ ಸೀಮೀತವಾಗಿದ್ದುದನ್ನು ಗ್ರಾಮೀಣ ಭಾಗಕ್ಕೂ ವಿಸ್ತರಿಸಿ ಅವರನ್ನು ಸ್ಪರ್ಧಾ ಜಗತ್ತಿಗೆ ಪರಿಚಯಿಸುವ ಉದ್ದೇಶವಿದೆ ಎಂದು ಹೇಳಿದರು.

ತಾಲೂಕಿನ ವೆಂಕಟಯ್ಯನ ಛತ್ರದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಜಿಲ್ಲೆಯ 50 ಸರ್ಕಾರಿ ಶಾಲೆಗಳಿಗೆ ಸಿಎಸ್‍ಆರ್ ನೆರವಿನಡಿ ಉಚಿತವಾಗಿ ಇನ್ಪೋಸಿಸ್, ಪಂಚಶೀಲ ರೋಟರಿ ಸಂಸ್ಥೆಗಳು ಕೊಡುಗೆಯಾಗಿ ನೀಡಿರುವ 5.75 ಕೋಟಿ ವೆಚ್ಚದ ಸ್ಟ್ಯಾಂಡ್ ಸಮೇತ ಸ್ಮಾರ್ಟ್ ಟಿ.ವಿ ಹಾಗೂ ಟ್ಯಾಬ್ ಪರಿಕರಗಳನ್ನು ವಿತರಿಸಿ ಅವರು ಮಾತನಾಡಿದರು.

ಪ್ರಸ್ತುತ ಸಾಲಿನಲ್ಲಿ ಮಕ್ಕಳು ಚಿಕ್ಕ ವಯಸ್ಸಿನಿಂದಲೇ ಪರಿಣಾಮಕಾರಿಯಾಗಿ ಕಲಿಕಾ ಕೌಶಲ್ಯವನ್ನು ಹೆಚ್ಚಿಸಿಕೊಳ್ಳಲು ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಅಲ್ಲದೆ ಕಲಿಕಾ ಪ್ರಕ್ರಿಯೆಯನ್ನು ಸುಲಭಗೊಳಿಸಲು ಡಿಜಿಟಲ್ ಶಿಕ್ಷಣಕ್ಕೆ ಮಕ್ಕಳನ್ನು ಪ್ರೇರೇಪಿಸುವ ಕೆಲಸ ಆಗಬೇಕಿದೆ, ಮುಂದಿನ ದಿನಗಳಲ್ಲಿ ಹೆಚ್ಚಿನ ಶಾಲೆಗಳನ್ನು ಡಿಜಿಟಲ್ ಶಿಕ್ಷಣಕ್ಕೆ ಪರಿಗಣಿಸಲಾಗುತ್ತದೆ ಎಂದು ತಿಳಿಸಿದರು.

ಸ್ವಾರ್ಟ್ ಟಿ.ವಿ ಹಾಗೂ ಟ್ಯಾಬ್‍ಗಳ ಮೂಲಕ ಮಕ್ಕಳಿಗೆ ಡಿಜಿಟಲ್ ಶಿಕ್ಷಣ ನೀಡಲು 100 ಮಂದಿ ಶಿಕ್ಷಕರಿಗೆ ತರಬೇತಿ ನೀಡಲಾಗಿದೆ. ಜಿಲ್ಲೆಯ 5 ತಾಲೂಕುಗಳಿಗೆ ತಲಾ 10 ಶಾಲೆಗಳಿಗೆ ಡಿಜಿಟಲ್ ಕಲಿಕಾ ಪರಿಕರಗಳನ್ನು ವಿತರಿಸಲಾಗುತ್ತಿದೆ ಎಂದು ಹೇಳಿದರು.

ಮಕ್ಕಳನ್ನು ಕಡಿಮೆ ಅವಧಿಯಲ್ಲಿ ತರಬೇತುಗೊಳಿಸಿದ ಶಿಕ್ಷಕರನ್ನು ಅಭಿನಂದಿಸಿದ ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರು ಯಾವುದೇ ಹಂತದಲ್ಲಿ ಮಕ್ಕಳ ಓದು ನಿಲ್ಲಬಾರದು ಎಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ರಾಮಚಂದ್ರರಾಜೇ ಅರಸ್, ಪಂಚಶೀಲ ರೋಟರಿ ಸಂಸ್ಥೆಯ ಕಿರಣ್ ರಾಬರ್ಟ್, ಸುಂದರ್, ಇನ್ಫೋಸಿಸ್ ಸಂಸ್ಥೆಯ ಸತೀಶ್, ಆನಂದ್ ಅವರು ಮಕ್ಕಳಿಗೆ ಡಿಜಿಟಲ್ ಶಿಕ್ಷಣದ ಅಗತ್ಯತೆ ಕುರಿತು ಮಾತನಾಡಿದರು.

ಶಾಲಾ ಶಿಕ್ಷಣ ಇಲಾಖೆಯ ಅಧಿಕಾರಿ ಸಿದ್ದರಾಜು, ಇನ್ಫೋಸಿಸ್ ಸಂಸ್ಥೆಯ ಬಿಳಿಗಿರಿರಂಗ, ಪಂಚಶೀಲ ರೋಟರಿ ಸಂಸ್ಥೆಯ ರಾಜೇಂದ್ರ ಪ್ರಸಾದ್, ಆನಂದ್, ಮುಖ್ಯಶಿಕ್ಷಕರಾದ ನಾಗರತ್ನಮ್ಮ ಉಪಸ್ಥಿತರಿದ್ದರು.


Share this with Friends

Related Post