Mon. Dec 23rd, 2024

ಧಾರವಾಡ ಲೋಕಸಭಾ ಕ್ಷೇತ್ರದಿಂದ ದಿಂಗಾಲೇಶ್ವರ ಸ್ವಾಮೀಜಿ ಸ್ಪರ್ಧೆ

Share this with Friends

ಬೆಂಗಳೂರು,ಏ.8: ಧಾರವಾಡ ಲೋಕಸಭಾ ಕ್ಷೇತ್ರದಿಂದ ಹಾಲಿ ಸಂಸದ ಪ್ರಹ್ಲಾದ್ ಜೋಶಿ ವಿರುದ್ಧ ಫಕೀರ್‌ ದಿಂಗಾಲೇಶ್ವರ ಮಹಾಸ್ವಾಮೀಜಿ ಕಣಕ್ಕಿಳಿದಿದ್ದಾರೆ.

ಬೆಂಗಳೂರಿನ ಸದಾಶಿವ ನಗರ ವೀರಶೈವ ಲಿಂಗಾಯತ ಭವನ ದಲ್ಲಿ ಶ್ರೀ ಜಗದ್ಗುರು ಫಕೀರೇಶ್ವರ ಟ್ರಸ್ಟ್ ವತಿಯಿಂದ ಪೂಜ್ಯ ಶ್ರೀ ಪಕೀರ ದಿಂಗಾಲೇಶ್ವರ ಮಹಾಸ್ವಾಮಿಗಳು ತಮ್ಮ ಅಭಿಮಾನಿಗಳು ಮತ್ತು ಶಿಷ್ಯರ ಸಮ್ಮುಖದಲ್ಲಿ ಸಭೆ ನಡೆಸಿ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರನ್ನು ಸೋಲಿಸುವುದೇ ತಮ್ಮ ಗುರಿ ಎಂದು ಕಡಕ್ಕಾಗಿ ಹೇಳಿದರು.

ಸಮುದಾಯದ ಸ್ವಾಮೀಜಿ ಹಾಗೂ ಮುಖಂಡರ ಜೊತೆಗೆ ಸಭೆ ನಡೆಸಿದ್ದೇನೆ, ಧಾರವಾಡ ಲೋಕಸಭಾ ಕ್ಷೇತ್ರದಿಂದ ಕಣಕ್ಕೆ ಇಳಿಯಲು ಒತ್ತಾಯವಿತ್ತು, ಕಳೆದ 16 ದಿನಗಳಿಂದ ನಮ್ಮ ನಿರ್ಧಾರ ಮಾಧ್ಯಮದ ಮೂಲಕ ಪ್ರಕಟ ಮಾಡುತ್ತಾ ಬಂದಿದ್ದೇವೆ. ಅಂತಿಮವಾಗಿ ಚುನಾವಣೆಯಲ್ಲಿ ಸ್ಪರ್ಧೆ ಮಾಡಲು ತೀರ್ಮಾನ ಮಾಡಿದ್ದೇನೆ ಎಂದು ಘೋಷಿಸಿದರು.

ಧಾರವಾಡ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುತ್ತೇನೆ. ಕಾಂಗ್ರೆಸ್‌, ಬಿಜೆಪಿ ಎರಡೂ ರಾಷ್ಟ್ರೀಯ ಪಕ್ಷಗಳು ಎಲೆಕ್ಷನ್ ಫಿಕ್ಸಿಂಗ್ ಮಾಡಿಕೊಂಡಿವೆ ಎಂದು ಧಾರವಾಡದ ಜನರು ಮಾತನಾಡುತ್ತಿದ್ದಾರೆ, ಇದು ಜನರಿಗೆ ದ್ರೋಹ ಮಾಡಿದಂತೆ, ಧರ್ಮದಲ್ಲಿ ರಾಜಕೀಯ ಇರಬಾರದು,ರಾಜಕೀಯದಲ್ಲಿ ಧರ್ಮ ಇರಬೇಕು ಎಂದು ಜನರು ಬಯಸಿದ್ದಾರೆ. ನೊಂದ ಜನರು ನಮ್ಮ ಜೊತೆಗೆ ನೋವು ತೊಡಗಿಕೊಂಡರು,ಜನರಿಗಾಗಿ ಚುನಾವಣೆಯಲ್ಲಿ ಸ್ಪರ್ಧಿಸುತ್ತೇನೆ ಎಂದು ಸ್ಪಷ್ಟಪಡಿಸಿದರು.

ಧಾರವಾಡ ಸಂಸದ ಅಭ್ಯರ್ಥಿಯನ್ನು ಬದಲಾವಣೆ ಮಾಡುವಂತೆ ಮನವಿ ಮಾಡಿದ್ದೆ,ಪ್ರಲ್ಹಾದ್ ಜೋಶಿಯವರ ಕೈಯಲ್ಲಿ ನೋವು ಅನುಭವಿಸಿದ ಜನರ ಧ್ವನಿಗಾಗಿ ನಾನು ಹೋರಾಟ ನಡೆಸುತ್ತಿದ್ದೇನೆ ಎಂದು ತಿಳಿಸಿದರು.

ಕಳೆದ ವಿಧಾನಸಭೆ ಚುನಾವಣೆ ಸಮಯದಲ್ಲಿ ಲಿಂಗಾಯತರಿಗೆ ಅನ್ಯಾಯ ಮಾಡಲಾಗಿದೆ. ಜಗದೀಶ್​ ಶೆಟ್ಟರ್​ ಅವರಿಗೆ ಟಿಕೆಟ್​ ತಪ್ಪಿಸಲಾಗಿದೆ. ಬಿಎಸ್​ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಅರ್ಧಕ್ಕೆ ಕೆಳಗೆ ಇಳಿಸಲಾಗಿದೆ. ಇದು ಲಿಂಗಾಯತ ಸಮುದಾಯದವರಿಗೆ ಮಾಡಿದ ಅಪಮಾನ,ಇದೆಲ್ಲ ನನಗೆ ನೋವು ತಂದಿದೆ,ಆದ್ದರಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲು ನಿರ್ಧರಿಸಿದ್ದೇನೆ ಎಂದು ಶಿರಹಟ್ಟಿಯ ಪಕೀರ ದಿಂಗಾಲೇಶ್ವರ ಸ್ವಾಮೀಜಿ‌ ಸ್ಪಷ್ಟ ಪಡಿಸಿದರು.

ಈ ವೇಳೆ ಸಮುದಾಯದ ಸ್ವಾಮೀಜಿಗಳು ಉಪಸ್ಥಿತರಿದ್ದರು.


Share this with Friends

Related Post