Sun. Mar 8th, 2026

ಬೆಳಗಾವಿಯಲ್ಲೂ ಡಿನ್ನರ್ ಮೀಟಿಂಗ್: ಯಾವ ಪುರುಷಾರ್ಥಕ್ಕೆ ಬೆಳಗಾವಿ ಅಧಿವೇಶನ?

Share this with Friends

ಬೆಳಗಾವಿ: ಬೆಂಗಳೂರು ಮಾತ್ರವಲ್ಲ ಬೆಳಗಾವಿಯಲ್ಲೂ ಡಿನ್ನರ್ ರಾಜಕೀಯ ಮುಂದುವರೆಸಿದ್ದು, ಯಾವ ಪುರುಷಾರ್ಥಕ್ಕೆ ಬೆಳಗಾವಿ ಚಳಿಗಾಲದ ಅಧಿವೇಶನ ಕರೆದಿದ್ದೀರಿ?ರಾಜ್ಯ ಸರಕಾರದ ಲಜ್ಜೆಗೆಟ್ಟ ವರ್ತನೆಯಿಂದ ರೈತರು ಬೀದಿಗೆ ಬಂದಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ವಾಗ್ದಾಳಿ ನಡೆಸಿದ್ದಾರೆ.

ಬೆಳಗಾವಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು,ಕಳೆದ ಮೂರ್ನಾಲ್ಕು ತಿಂಗಳಿನಿಂದ ಡಿನ್ನರ್ ಮೀಟಿಂಗ್ ಮಾಡಿಕೊಂಡು ಬಂದಿದ್ದಾರೆ. ಇವರ ಡಿನ್ನರ್, ಲಂಚ್ ಮೀಟಿಂಗ್ ಭರಾಟೆಯಲ್ಲಿ ರಾಜ್ಯದ ಆಡಳಿತವನ್ನು ಸಂಪೂರ್ಣವಾಗಿ ಮರೆತಿದ್ದಾರೆ. ನಾಯಕತ್ವದ ಗೊಂದಲದ ನಡುವೆ ಚಳಿಗಾಲದ ಅಧಿವೇಶನ ಬೇಡ, ಮುಖ್ಯಮಂತ್ರಿ ಕುರ್ಚಿ ಕುರಿತ ಸಮಸ್ಯೆ ಪರಿಹರಿಸಿಕೊಂಡು ಅಧಿವೇಶನಕ್ಕೆ ಬನ್ನಿ ಎಂದು ಆಗ್ರಹ ಮಾಡಿದ್ದೆವು ಆದರೆ ಕಾಂಗ್ರೆಸ್ ಪಕ್ಷದವರು ಇದು ನಮ್ಮ ಆಂತರಿಕ ವಿಚಾರ ಎಂದಿದ್ದರು. ಆದರೆ, ಮುಖ್ಯಮಂತ್ರಿ ವಿಚಾರ ರಾಜ್ಯಕ್ಕೆ ಸಂಬಂಧಿಸಿದ್ದು. ರಾಜ್ಯದ ಜನರು ಕಳೆದ ಐದಾರು ತಿಂಗಳುಗಳಿಂದ ಬೇಸತ್ತಿದ್ದಾರೆ. ಮುಖ್ಯಮಂತ್ರಿ ಇವತ್ತು ಇಳೀತಾರೆ; ನಾಳೆ ಇಳಿಯುತ್ತಾರೆ. ಇವರಾಗುತ್ತಾರೆ; ಅವರಾಗುತ್ತಾರೆ ಎಂದು ಕಾದು ನೋಡಿದ್ದಾರೆ.ರಾಜ್ಯ ಸರಕಾರದ ಲಜ್ಜೆಗೆಟ್ಟ ವರ್ತನೆಯಿಂದ ರೈತರು ಬೀದಿಗೆ ಬಂದಿದ್ದಾರೆ ಎಂದರು.

ರಾಜ್ಯದ ರೈತರ ಸಮಸ್ಯೆ ಪರಿಹರಿಸಲು ಇವರು ಯಾವುದೇ ಸಮಯ ಕೊಡಲಿಲ್ಲ. ಡಿನ್ನರ್, ಲಂಚ್ ಮೀಟಿಂಗ್ ನಲ್ಲಿ ರೈತರ ಸಮಸ್ಯೆ ಕುರಿತು ಚರ್ಚಿಸಿಲ್ಲ; ಕೇವಲ ತಮ್ಮ ಮುಖ್ಯಮಂತ್ರಿ ಕುರ್ಚಿ ಉಳಿಸಿಕೊಳ್ಳಲು ಕೆಲವರು ಸಭೆ ನಡೆಸುತ್ತಾರೆ. ಡಿ.ಕೆ.ಶಿವಕುಮಾರ್ ಅವರ ನೇತೃತ್ವದ ತಂಡದವರು ಹೇಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಕುರ್ಚಿಯಿಂದ ಬೀಳಿಸಬೇಕೆಂದು ಕಾರ್ಯತಂತ್ರದ ಸಭೆ ಮಾಡುತ್ತಿದ್ದಾರೆ, ಬೆಳಗಾವಿಯಲ್ಲೂ ಡಿನ್ನರ್ ರಾಜಕೀಯ ಮುಂದುವರೆಸಿದ್ದು, ಇದು ಲಜ್ಜೆಗೆಟ್ಟ ಕಾಂಗ್ರೆಸ್ ಸರಕಾರ ಎಂದು ಟೀಕಿಸಿದರು.

ಕಬ್ಬು ಬೆಳೆಗಾರರ ಸಮಸ್ಯೆ ಇನ್ನೂ ಇತ್ಯರ್ಥ ಆಗಿಲ್ಲ. ನಿಮ್ಮ ಆಂತರಿಕ ಕಚ್ಚಾಟದಿಂದ ಆಡಳಿತ ಸಂಪೂರ್ಣ ಸ್ಥಗಿತವಾಗಿದೆ. ಮೆಕ್ಕೆಜೋಳ ಖರೀದಿ ಕೇಂದ್ರವನ್ನು ಸಕಾಲದಲ್ಲಿ ತೆರೆದಿಲ್ಲ, ಕಾಂಗ್ರೆಸ್ ಪಕ್ಷ ನೀಡಿದ್ದ ಭರವಸೆಗಳು ಈಡೇರಿಲ್ಲ; ನಾಡಿನ ಜನರು ಸರಕಾರದ ಬಗ್ಗೆ ಬೇಸತ್ತಿದ್ದಾರೆ; ಮಾತ್ರವಲ್ಲದೇ ವಿಶ್ವಾಸವನ್ನೂ ಕಳೆದುಕೊಂಡಿದ್ದಾರೆ ಎಂದು ಕಿಡಿಕಾರಿದರು.


Share this with Friends

Related Post