Fri. Nov 1st, 2024

ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ಜಾತಿ ಗಣತಿ ವರದಿ ಜಾರಿ ಬಗ್ಗೆ ತೀರ್ಮಾನ-ಸಿಎಂ

Share this with Friends

ಕೊಪ್ಪಳ: ಜಾತಿ ಗಣತಿ ವರದಿಯನ್ನು ಇಲಾಖೆ ಸಚಿವರು ಮತ್ತು ಸಂಪುಟ ಸಭೆಯಲ್ಲಿರಿಸಿ ಚರ್ಚಿಸಿದ ನಂತರ ಜಾರಿ ಮಾಡುವ ಬಗ್ಗೆ ತೀರ್ಮಾನಿಸಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.

ಕೊಪ್ಪಳದಲ್ಲಿ ಶುಕ್ರವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಸಿಎಂ,
ಜಾತಿ ಗಣತಿ ಜಾರಿ ಮಾಡುವ ಬಗ್ಗೆ ಶಾಸಕ ಬಸವರಾಜ ರಾಯರೆಡ್ಡಿ ಅವರು ತಮ್ಮ ಅಭಿಪ್ರಾಯ ತಿಳಿಸಿದ್ದಾರೆ, ಮುಂದಿನ ವಾರ ಹಿಂದುಳಿದ ವರ್ಗಗಳ ಇಲಾಖಾ ಸಚಿವರ ಜೊತೆ ಚರ್ಚಿಸುತ್ತೇನೆ ಎಂದು ಹೇಳಿದರು.

ಒಳಮೀಸಲಾತಿ ಜಾರಿ ತರುವ ಬಗ್ಗೆ ಪತ್ರಕರ್ತರ ಪ್ರಶ್ನೆಗೆ, ಒಳಮೀಸಲಾತಿ ಜಾರಿ ಬಗ್ಗೆ ಸರ್ವೋಚ್ಛ ನ್ಯಾಯಾಲಯ ಆದೇಶ ನೀಡಿದೆ. ಈ ಸಂಬಂಧ ಸಚಿವ ಸಂಪುಟದಲ್ಲಿ ಹಾಗೂ ಪಕ್ಷದ ವರಿಷ್ಠರೊಂದಿಗೆ ಚರ್ಚಿಸುತ್ತೇನೆ ಎಂದು ಸಿಎಂ ಉತ್ತರಿಸಿದರು.

ಜೆಡಿಎಸ್ ಶಾಸಕ ಜಿ.ಟಿ.ದೇವೇಗೌಡರು ಸಿದ್ದರಾಮಯ್ಯನವರ ಪರ ಬ್ಯಾಟಿಂಗ್ ಮಾಡಿದ ಬಗ್ಗೆ ಹೆಚ್.ಡಿ ಕುಮಾರಸ್ವಾಮಿಯವರು ಟೀಕೆ ಮಾಡಿದ್ದಾರಲ್ಲಾ ಎಂಬ ಇನ್ನೊಂದು ಪ್ರಶ್ನೆಗೆ, ಜಿ.ಟಿ.ದೇವೇಗೌಡರು ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷರಾಗಿದ್ದು,ಹೇಳಿಕೆ ಸರಿಯಾಗಿಯೇ ಇರುತ್ತದೆ. ಭಾಜಪ ಮತ್ತು ಜೆಡಿಎಸ್ ನವರಿಗೆ ನಾನು ಅಧಿಕಾರದಲ್ಲಿದ್ದರೆ ಅವರ ಪಕ್ಷಗಳು ದುರ್ಬಲವಾಗುವ ಭಯ ಕಾಡುತ್ತಿದೆ ಎಂದು ಟಾಂಗ್ ನೀಡಿದರು.

ಸಚಿವ ಸತೀಶ್ ಜಾರಕಿಹೊಳಿಯವರು ಪಕ್ಷದ ವರಿಷ್ಠರನ್ನು ಭೇಟಿಯಾಗಿರುವ ಬಗ್ಗೆ ಪ್ರತಿಕ್ರಿಯಿಸಿ, ಎಐಸಿಸಿ ಅಧ್ಯಕ್ಷರಾಗಿರುವ ಖರ್ಗೆಯವರನ್ನು ಸಚಿವರಾಗಿರುವ ಸತೀಶ್ ಜಾರಕಿಹೊಳಿಯವರು ಭೇಟಿಯಾಗುವುದು ತಪ್ಪೇನಲ್ಲ, ಇಲ್ಲಸಲ್ಲದ ಊಹಾಪೋಹಗಳಿಗೆ ಯಾರೂ ಅವಕಾಶ ನೀಡಬಾರದು ಎಂದು ಸಿದ್ದರಾಮಯ್ಯ ಮನವಿ ಮಾಡಿದರು.


Share this with Friends

Related Post