ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ತೀವ್ರ ಕುತೂಹಲ ಕೆರಳಿಸಿರುವ ನಾಯಕತ್ವ ಬದಲಾವಣೆ ಹಾಗೂ ಮುಂದಿನ ಬಜೆಟ್ ಸಿದ್ಧತೆಗಳ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ವಿಧಾನಸೌಧದಲ್ಲಿ ಮಾಧ್ಯಮಗಳಿಗೆ ಮಹತ್ವದ ಹೇಳಿಕೆ ನೀಡಿದ್ದಾರೆ.
ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆಯ ವದಂತಿಗಳ ಕುರಿತು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಅಸಮಾಧಾನ ವ್ಯಕ್ತಪಡಿಸಿದ ಸಿಎಂ, “ನಾಯಕತ್ವದ ಬಗ್ಗೆ ಹೈಕಮಾಂಡ್ ಏನು ತೀರ್ಮಾನ ಕೈಗೊಳ್ಳುತ್ತದೋ ಅದೇ ಅಂತಿಮ. ಪದೇ ಪದೇ ಇದೇ ಪ್ರಶ್ನೆಯನ್ನು ಕೇಳುವ ಅಗತ್ಯವಿಲ್ಲ” ಎಂದು ಸ್ಪಷ್ಟಪಡಿಸಿದರು. ಇದೇ ವೇಳೆ ಡಿ.ಕೆ. ಶಿವಕುಮಾರ್ ಅವರ ಇತ್ತೀಚಿನ ಹೇಳಿಕೆಗಳ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಅವರು, “ಅವರು ಏನು ಹೇಳಿದ್ದಾರೋ ಅವರನ್ನೇ ಕೇಳಿ” ಎಂದು ಟಾಸ್ ನೀಡಿದರು.
ಬಜೆಟ್ ಪೂರ್ವಭಾವಿ ಸಭೆ:
ಮಾರ್ಚ್ನಲ್ಲಿ ಮಂಡನೆಯಾಗಲಿರುವ 2026-27ನೇ ಸಾಲಿನ ರಾಜ್ಯ ಬಜೆಟ್ ಕುರಿತು ಇಂದಿನಿಂದ ಸರಣಿ ಸಭೆಗಳು ಆರಂಭವಾಗಿವೆ. “ಎಲ್ಲಾ ಇಲಾಖೆಗಳ ಬೇಡಿಕೆಗಳನ್ನು ಆಲಿಸುತ್ತಿದ್ದೇವೆ. ಜನರ ನಿರೀಕ್ಷೆಗೆ ತಕ್ಕಂತೆ ಅಭಿವೃದ್ಧಿ ಪರ ಬಜೆಟ್ ನೀಡಲಾಗುವುದು” ಎಂದು ಭರವಸೆ ನೀಡಿದರು.
ಡಿಕೆಶಿ ದೆಹಲಿ ಪ್ರವಾಸಕ್ಕೆ ಸಿಎಂ ಒಪ್ಪಿಗೆ:
ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ದೆಹಲಿ ಪ್ರವಾಸದ ಬಗ್ಗೆ ಮಾಹಿತಿ ನೀಡಿದ ಸಿದ್ದರಾಮಯ್ಯ, “ಅಸ್ಸಾಂ ಚುನಾವಣೆ ಸಿದ್ಧತೆ ಕುರಿತ ಹೈಕಮಾಂಡ್ ಸಭೆಯಲ್ಲಿ ಭಾಗವಹಿಸಲು ಅವರು ತೆರಳುತ್ತಿದ್ದಾರೆ. ಈ ಬಗ್ಗೆ ನನಗೆ ಪತ್ರ ಬರೆದು ಮಾಹಿತಿ ನೀಡಿದ್ದಾರೆ” ಎಂದರು. ತಾವು ಸದ್ಯಕ್ಕೆ ದೆಹಲಿಗೆ ಹೋಗುತ್ತಿಲ್ಲ, ಬಜೆಟ್ ಕೆಲಸದಲ್ಲಿ ನಿರತನಾಗಿದ್ದೇನೆ ಎಂದು ಅವರು ತಿಳಿಸಿದರು.
ವಿರೋಧ ಪಕ್ಷಗಳಿಗೆ ಟಾಂಗ್:
ಡಾ. ಯತೀಂದ್ರ ಸಿದ್ದರಾಮಯ್ಯ ಅವರ ಹಸ್ತಕ್ಷೇಪದ ಕುರಿತ ವಿರೋಧ ಪಕ್ಷಗಳ ಆರೋಪಗಳನ್ನು ತಳ್ಳಿಹಾಕಿದ ಸಿಎಂ, “ಪ್ರತಾಪ್ ಸಿಂಹ ಸೇರಿದಂತೆ ಬಿಜೆಪಿ ನಾಯಕರು ಆಧಾರರಹಿತ ರಾಜಕೀಯ ಮಾಡುತ್ತಿದ್ದಾರೆ” ಎಂದು ಕಿಡಿಕಾರಿದರು

