ಬೆಂಗಳೂರು, ಏ.26: ಪಾರದರ್ಶಕ, ಮುಕ್ತ ಚುನಾವಣೆ ನಡೆಸುವಲ್ಲಿ ಚುನಾವಣಾ ಆಯೋಗಪೂರ್ಣ ವಿಫಲವಾಗಿದೆ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ದೂರಿದ್ದಾರೆ.
ಬೆಂಗಳೂರು ಗ್ರಾಮಾಂತರ ಲೋಕಸಭೆ ಕ್ಷೇತ್ರದ ವ್ಯಾಪ್ತಿಯಲ್ಲಿ ಗಿಫ್ಟ್ ಕಾರ್ಡುಗಳನ್ನು ಹಂಚಲಾಗಿದೆ,ಹಿಂದೆಯೂ ಇದೇ ಕೆಲಸ ಮಾಡಿದ್ದಾರೆ ಎಂದು ಕಿಡಿಕಾರಿದರು.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು,ಇದಕ್ಕೆ ತಮ್ಮ ಬಳಿ ಸಾಕ್ಷಿ ಇದೆ ಎಂದು ಮೊಬೈಲ್ ಪ್ರದರ್ಶಿಸಿ ಆರೋಪ ಮಾಡಿದರು.
ಹಣ ಹಂಚಿಕೊಂಡು ಚುನಾವಣಾ ನಡೆಸಲು ಅವಕಾಶ ಮಾಡಿಕೊಟ್ಟುಬಿಡಿ ಎಂದು ಆಯೋಗದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ ಸುರೇಶ್ ಪರವಾಗಿ ಕ್ಯೂ ಆರ್ ಕೋಡ್ ಇರುವ ಕೂಪನ್ ಗಳನ್ನು ಹಂಚಿಕೆ ಮಾಡಲಾಗಿದೆ,ಅದನ್ನು ತಡೆಯಲು ಹೋದ ಜೆಡಿಎಸ್, ಬಿಜೆಪಿ ಕಾರ್ಯಕರ್ತರ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಹೆಚ್ ಡಿ ಕೆ ವಾಗ್ದಾಳಿ ನಡೆಸಿದರು.
ಕುಸುಮ ಹನುಮಂತಯ್ಯ, ಕುಣಿಗಲ್ ಶಾಸಕ ಡಾ.ರಂಗನಾಥ್, ಮಾಗಡಿ ಶಾಸಕ ಬಾಲಕೃಷ್ಣ, ವಿಧಾನ ಪರಿಷತ್ ಸದಸ್ಯ ಪುಟ್ಟಣ್ಣ, ರಾಮನಗರ ಶಾಸಕ ಇಕ್ಬಾಲ್ ಹುಸೇನ್, ಡಿಸಿಎಂ ಡಿ.ಕೆ.ಶಿವಕುಮಾರ್ ಹೆಸರಿನಲ್ಲಿ ಕೂಪನ್ ಕಾರ್ಡ್ ಹಂಚಿಕೆ ಮಾಡಿದ್ದಾರೆ ಎಂದು ಗಂಭೀರ ಸ್ವರೂಪದ ಆರೋಪ ಮಾಡಿದರು.
ಕೂಪನ್ ಕಾರ್ಡುಗಳನ್ನು ಪ್ರದರ್ಶಿಸಿದ ಕುಮಾರಸ್ವಾಮಿ,ಕಳೆದ ವಿಧಾನಸಭೆ ಚುನಾವಣೆಯಲ್ಲೂ ಇದೇ ರೀತಿ ಕೂಪನ್ ಕಾರ್ಡುಗಳನ್ನು ಕಾಂಗ್ರೆಸ್ ಹಂಚಿತ್ತು,ಹಾಗಾಗಿ ಗೆದ್ದಿದೆ ಎಂದು ಕಿಡಿಕಾರಿದರು.