ಮೈಸೂರು ಏ.18: ಮತದಾನದ ಪ್ರಮಾಣವನ್ನು ಹೆಚ್ಚಿಸಲು ಮತದಾರರ ಮಾಹಿತಿ ಚೀಟಿಯನ್ನು ಹಂಚಲಾಗುತ್ತಿದೆ.
ಮತದಾರರು ಆ ಚೀಟಿಯ ಹಿಂಭಾಗದಲ್ಲಿರುವ ಕ್ಯೂ ಆರ್ ಕೋಡನ್ನು ಸ್ಕ್ಯಾನ್ ಮಾಡುವ ಮೂಲಕ ತಮ್ಮ ಪೋಲಿಂಗ್ ಸ್ಟೇಷನ್ ಮಾಹಿತಿಯನ್ನು ಪಡೆಯಬಹುದು ಎಂದು ಜಿಲ್ಲಾ ಚುನಾವಣಾಧಿಕಾರಿ ಡಾ. ಕೆ.ವಿ ರಾಜೇಂದ್ರ ತಿಳಿಸಿದರು.
ಚೆಸ್ಕಾಂ ಹಾಗೂ ಜಿಲ್ಲಾ ಸ್ವೀಪ್ ಸಮಿತಿ ಅರಮನೆಯ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಮುಂಭಾಗ ಆಯೋಜಿಸಲಾಗಿದ್ದ ಬಲೂನ್ ಅನಾವರಣ ಹಾಗೂ ಜಾಥಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಬೂತ್ ಮಟ್ಟದ ಅಧಿಕಾರಿಗಳಿಂದ ಪ್ರತಿ ಮನೆಗೂ ಮತದಾರರ ಮಾಹಿತಿ ಚೀಟಿಯನ್ನು ಹಂಚಿಕೆ ಮಾಡಿಸಲಾಗುತ್ತಿದೆ ಮತದಾನ ಮಾರ್ಗದರ್ಶಿಗಳಿಂದ ಅವರಿಗೆ ಮಾಹಿತಿಯನ್ನು ನೀಡಲಾಗುತ್ತದೆ ಎಂದು ತಿಳಿಸಿದರು.
ಚುನಾವಣೆಯನ್ನು ಯಶಸ್ವಿಗೊಳಿಸಲು ಹಾಗೂ ಮತದಾನ ಪ್ರಮಾಣವನ್ನು ಹೆಚ್ಚಿಸಲು ಸೆಸ್ಕಾಂನವರು ನಮ್ಮೊಂದಿಗೆ ಸೇರಿ ತಮ್ಮ ಸಿಬ್ಬಂದಿಗಳಿಂದ ಪ್ರತಿ ಮನೆಗೂ ಮತದಾರರ ಮಾಹಿತಿ ಚೀಟಿಯನ್ನು ತಲುಪುವಂತೆ ಮಾಡಬೇಕು ಎಂದು ರಾಜೇಂದ್ರ ಮನವಿ ಮಾಡಿದರು.
ಜಿಲ್ಲಾ ಸ್ವೀಪ್ ಸಮಿತಿಯು ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಮತದಾರರಲ್ಲಿ ನೈತಿಕ ಮತದಾನ ಮಾಡಲು ಪ್ರೇರೇಪಿಸುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಚೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರಾದ ಜಿ. ಶೀಲಾ, ಚಲನಚಿತ್ರ ನಟ ಜಿಮ್ ರವಿ ಮಾತನಾಡಿ,ಎಲ್ಲರೂ ತಪ್ಪದೆ ಮತದಾನಮಾಡಬೇಕು ಎಂದು ಹೇಳಿದರು.
ನಗರ ಪೊಲೀಸ್ ಆಯುಕ್ತ ರಮೇಶ್ ಬಾನೋತ್, ಜಿಲ್ಲಾ ಸ್ವೀಪ್ ಸಮಿತಿಯ ಅಧ್ಯಕ್ಷೆ ಕೆ.ಎಂ ಗಾಯತ್ರಿ, ಮಹಾನಗರ ಪಾಲಿಕೆಯ ಆಯುಕ್ತ ಎನ್. ಎನ್ ಮಧು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.